ನವದೆಹಲಿ: ಪ್ರಶ್ನೆಗಾಗಿ ಲಂಚ (Cash for Query) ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (MP Mahua Moitra) ಅವರಿಗೆ ಅಕ್ಟೋಬರ್ 31ರಂದು ವಿಚಾರಣೆಗೆ ಹಾಜರಾಗುವಂತೆ ಲೋಕಸಭೆಯ ನೈತಿಕ ಸಮಿತಿಯು ಸೂಚಿಸಿದೆ(Lok Sabha panel). ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತಿಯು ಈಗಾಗಲೇ, ಬಿಜೆಪಿ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಮತ್ತು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ (Jai Anant Dehadrai) ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಅದಾನಿ ಗ್ರೂಪ್(Adani Group) ಮತ್ತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮೋಯಿತ್ರಾ ಅವರು ಉದ್ಯಮಿಯಿಂದ ಲಂಚ ಸ್ವೀಕರಿಸಿದ್ದಾರೆಂದು ಆರೋಪಿಸಿದ್ದರು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಅವರಿಗೆ ಪತ್ರ ಬರೆದು, ಮಹುವಾ ಮೋಯಿತ್ರಾ ಅವರನ್ನು ಸಂಸತ್ತಿನಿಂದ ಅಮಾನತು ಮಾಡುವಂತೆ ಕೋರಿದ್ದರು.
ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ದೇಹದ್ರಾಯ್ ಅವರು ಆಗಮಿಸಿ ತಮ್ಮ ಗಂಭೀರ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಅಕ್ಟೋಬರ್ 31ರಂದು ಮಹುವಾ ಮೋಯಿತ್ರಾ ಅವರನ್ನು ಕರೆಸಲು ನಿರ್ಧರಿಸಲಾಯಿತು. ಅವರು ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡಲಿದ್ದಾರೆ. ಅವರು ನೀಡುವ ವಿವರಣೆಗಳು ಲಭ್ಯವಾಗುವಂತೆ ಮಾಡಲು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಲೋಕಸಭೆಯ ನೈತಿಕ ಸಮಿತಿಯ ಅಧ್ಯಕ್ಷ ವಿನೋದ್ ಸೋನಕರ್ ಅವರು ಹೇಳಿದ್ದಾರೆ.
ಸಂಸದೆ ಮಹುವಾ ಮೋಯಿತ್ರಾ ಅವರಿಂದ ವಂಚಕ ಮಾಜಿ ಪ್ರೇಮಿ ಎಂದು ಕರೆಯಿಸಿಕೊಂಡಿರುವ ವಕೀಲ ಜೈ ಅನಂತ್ ದೇಹದ್ರಾಯ್ ಅವರನ್ನು ಪ್ರಶ್ನೆಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಪಾಟಿ ಸವಾಲಿಗೆ ಒಳಪಡಿಸಿತು ಎಂದು ಮೂಲಗಳು ತಿಳಿಸಿವೆ.
ನಿಶಿಕಾಂತ್ ದುಬೆ ಅವರನ್ನು ಮೋಯಿತ್ರಾ ಅವರು ನಕಲಿ ಪದವಿ ಹೊಂದಿದ್ದಾರೆ ಎಂದು ಆರೋಪಿಸಿದ ಕಾರಣ ಅವರ ವಿರುದ್ಧ ಆರೋಪ ಹೊರಿಸುತ್ತೀರಾ ಎಂದು ಸಮಿತಿಯು ಕೇಳಿದೆ. ಅಲ್ಲದೇ, ಮೋಯಿತ್ರಾ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: MP Mahua Moitra: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಸಂಸದೆ ಮಹುವಾ ಮೋಯಿತ್ರಾ! ಬಿಜೆಪಿ ಆರೋಪ
ಏನಿದು ಲಂಚಕ್ಕಾಗಿ ಪ್ರಶ್ನೆ ಪ್ರಕರಣ?
ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ತೃಣಮೂಲ ಕಾಂಗ್ರೆಸ್ ಶಾಸಕಿ ಮಹುವಾ ಮೋಯಿತ್ರಾ (MP Mahua Moitra) ಅವರು ಲಂಚ ಪಡೆದಿದ್ದಾರೆಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕ ಸಭಾ ಸ್ರೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಬಳಿಕ ಇಡೀ ಪ್ರಕರಣ ಬಯಲಾಗಿತ್ತು. ಅಲ್ಲದೇ, ಕೂಡಲೇ ಸಂಸದ ಸ್ಥಾನದಿಂದ ಅಮಾನತು ಮಾಡುವಂತೆ ಅವರು ಕೋರಿದ್ದರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅದಾನಿ ಗ್ರೂಪ್(Adani Group) ಗುರಿಯಾಗಿಸಿಕೊಂಡು ಪ್ರಶ್ನೆ ಕೇಳುವುದಕ್ಕಾಗಿ ಮಹುವಾ ಮೋಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ (Darshan Hiranandani) ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದರು.