ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಗುರಿಯಾಗಿಸಿಕೊಂಡು ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಲಂಚ ಪಡೆದ ಆರೋಪದಲ್ಲಿ ಮಹುವಾ ಮೊಯಿತ್ರಾ (Mahua Moitra) ಅವರಿಗೆ ಸಂಕಷ್ಟ ಎದುರಾಗಿದೆ. ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ನವೆಂಬರ್ 2ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಲೋಕಸಭೆಯ ನೈತಿಕ ಸಮಿತಿಯು (Lok Sabha Ethnics Committee) ಸಮನ್ಸ್ ಜಾರಿ ಮಾಡಿದೆ.
ನೈತಿಕ ಸಮಿತಿ ಎದುರು ಹಾಜರಾಗಲು ನವೆಂಬರ್ 5ರವರೆಗೆ ವಿನಾಯಿತಿ ಬೇಕು ಎಂದು ಮಹುವಾ ಮೊಯಿತ್ರಾ ಅವರು ಮನವಿ ಮಾಡಿದ್ದರು. ಕ್ಷೇತ್ರದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣದಿಂದಾಗಿ ದಿನಾಂಕ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು. ಆದರೆ, ಲೋಕಸಭೆ ನೈತಿಕ ಸಮಿತಿಯು ನವೆಂಬರ್ 2ರಂದೇ ಹಾಜರಾಗಬೇಕು. ಬೇರೆ ದಿನಾಂಕ ನೀಡುವುದಿಲ್ಲ ಎಂದು ತಿಳಿಸಿದೆ. ಇದಕ್ಕೂ ಮೊದಲು ಅಕ್ಟೋಬರ್ 31ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸಮಿತಿ ಸೂಚಿಸಿತ್ತು.
ಐಡಿ ಪಾಸ್‌ವರ್ಡ್ ಕೊಟ್ಟಿದ್ದು ನಿಜ ಎಂದ ಸಂಸದೆ
ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ ಅವರಿಗೆ ಸಂಸತ್ ಐಡಿ ಹಾಗೂ ಪಾಸ್‌ವರ್ಡ್ ಕೊಟ್ಟಿದ್ದು ನಿಜ ಎಂದು ಇಂಡಿಯಾ ಟುಡೇ ಜತೆ ಮಾತನಾಡುವಾಗ ಒಪ್ಪಿಕೊಂಡಿದ್ದಾರೆ. “ಉದ್ಯಮಿ ದರ್ಶನ್ ಹಿರಾನಂದನಿ ಅವರಿಗೆ ಸಂಸತ್ ಐಡಿ ಹಾಗೂ ಪಾಸ್‌ವರ್ಡ್ ಕೊಟ್ಟಿದ್ದು ನಿಜ. ಆದರೆ, ಹಣ ಪಡೆದು ಪ್ರಶ್ನೆ ಕೇಳುವ ದಿಸೆಯಲ್ಲಿ ಐಡಿ, ಪಾಸ್‌ವರ್ಡ್ ಕೊಟ್ಟಿಲ್ಲ. ಸಂಸತ್ತಿನಲ್ಲಿ ನಾನು ಕೇಳುವ ಪ್ರಶ್ನೆಗಳನ್ನು ಟೈಪ್ ಮಾಡಲು ಅವರಿಗೆ ಐಡಿ ಹಾಗೂ ಪಾಸ್‌ವರ್ಡ್ ಕೊಟ್ಟಿದ್ದೇನೆ. ನಾನು ಸಂಸತ್ ವೆಬ್‌ಸೈಟ್‌ಗೆ ಕೊಡುವ ಪ್ರಶ್ನೆಗಳನ್ನು ಹಿರಾನಂದನಿ ಕಚೇರಿಯಲ್ಲಿರುವವರು ಟೈಪ್ ಮಾಡಿದ್ದಾರೆ. ಇದಕ್ಕಾಗಿ ನಾನು ಐಡಿ, ಪಾಸ್‌ವರ್ಡ್ ಕೊಟ್ಟಿದ್ದೇನೆಯೇ ಹೊರತು ಹಣಕ್ಕಾಗಿ ಅಲ್ಲ” ಎಂದಿದ್ದಾರೆ.
ದರ್ಶನ್ ಅಫಿಡವಿಟ್‌ನಲ್ಲಿ ಏನಿತ್ತು?
ಸಂಸತ್ತಿನ ನೈತಿಕ ಸಮಿತಿಗೆ ದರ್ಶನ್ ಹಿರಾನಂದನಿ ಅವರು ಅಫಿಡವಿಟ್ ಸಲ್ಲಿಸಿದ್ದು, “ಮಹುವಾ ಮೊಯಿತ್ರಾ ಅವರು ನನಗೆ ಸಂಸತ್ತಿನ ಐಡಿ ಹಾಗೂ ಪಾಸ್‌ವರ್ಡ್ ಕೊಟ್ಟಿದ್ದರು. ಮಹುವಾ ಮೊಯಿತ್ರಾ ಅವರು ಕೇಳುವ ಪ್ರಶ್ನೆಗಳನ್ನು ನಾನು ಪೋಸ್ಟ್ ಮಾಡಲು ಐಡಿ-ಪಾಸ್‌ವರ್ಡ್ ಕೊಟ್ಟಿದ್ದರು” ಎಂಬುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. “ಮಹುವಾ ಮೊಯಿತ್ರಾ ಅವರು ಕ್ಷಿಪ್ರವಾಗಿ ರಾಷ್ಟ್ರ ರಾಜಕಾರಣದಲ್ಲಿ ಮಿಂಚಲು ಬಯಸಿದ್ದರು. ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ನಿಂದಿಸುವ ಮೂಲಕ ವೇಗವಾಗಿ ಜನಪ್ರಿಯತೆ ಗಳಿಸಲು ಗೆಳೆಯರಿಂದ ಸಲಹೆ ಪಡೆದಿದ್ದರು” ಎಂಬುದಾಗಿಯೂ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Cash For Question Row: ಸಂಸದೆ ಮಹುವಾ ಎಂಪಿ ಲಾಗಿನ್ ಬೇರೆಯವರು ಬಳಸಿದ್ದರೆ ಮಹಾಪರಾಧ!
ದುಬೆ ಆರೋಪ ಏನು?
ಇಂಧನ ಮತ್ತು ಮೂಲಸೌಕರ್ಯಗಳ ಒಪ್ಪಂದವನ್ನು ಅದಾನಿ ಗ್ರೂಪ್ ಎದುರು ಪಡೆಯಲು ಹಿರಾನಂದನಿ ಗ್ರೂಪ್ ಪಡೆಯಲು ವಿಫಲವಾಗಿತ್ತು. ಹಾಗಾಗಿ, ಹಿರಾನಂದನಿ ವ್ಯಾಪಾರಿ ಹಿತಾಸಕ್ತಿಗೆ ಅನುಗುಣವಾಗಿ ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ದುಬೆ ಅವರು ಆರೋಪಿಸಿದ್ದಾರೆ. ಅಲ್ಲದೇ, ಐಫೋನ್‌ನಂಥ ದುಬಾರಿ ಗಿಫ್ಟ್ ಮಾತ್ರವಲ್ಲದೇ, 2 ಕೋಟಿ ರೂಪಾಯಿ ಹಣವನ್ನು ಕಂಪನಿಯಿಂದ ಮಹುವಾ ಮೋಯಿತ್ರಾ ಪಡೆದುಕೊಂಡಿದ್ದಾರೆ. ಅಲ್ಲದೇ, ಚುನಾವಣೆಗೆ ಸ್ಪರ್ಧಿಸಲು ಹಿರಾನಂದಿನಿ ಕಂಪನಿ ಮೋಯಿತ್ರಾಗೆ 75 ಲಕ್ಷ ರೂಪಾಯಿ ನೀಡಿದೆ ಎಂದು ಆರೋಪಿಸಲಾಗಿದೆ. ಇದಕ್ಕೂ ಮೊದಲು ದುಬೆ ಆರೋಪವನ್ನು ದರ್ಶನ್ ಹಿರಾನಂದನಿ ಅಲ್ಲಗಳೆದಿದ್ದರು.