Site icon Vistara News

ರಸ್ತೆ ಅಪಘಾತದ ಗಾಯಾಳುಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ! ಕೇಂದ್ರದಿಂದ ರಾಷ್ಟ್ರಾದ್ಯಂತ ಜಾರಿ

]cashless medical treatment for accident victims by central Government

ನವದೆಹಲಿ: ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರವು(Central Government), ಅಪಘಾತಗಳಲ್ಲಿ ಗಾಯಗೊಂಡವರಿಗೆ (accident victims) ನಗದುರಹಿತ ವೈದ್ಯಕೀಯ ಚಿಕಿತ್ಸೆ (cashless medical treatment) ನೀಡುವ ವ್ಯವಸ್ಥೆಯನ್ನು ರಾಷ್ಟ್ರಾದ್ಯಂತ ಜಾರಿಗೆ ತರಲು ಹೊರಟಿದೆ. 2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಪ್ರಕಾರ ಈ ಹೊಸ ಉಕ್ರಮವನ್ನು ಕೈಗೊಳ್ಳಲಾಗುತ್ತಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (Road Transport & Highways Ministry) ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (Health and Family planning Ministry) ಸಚಿವಾಲಯಗಳು ಜಂಟಿಯಾಗಿ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿವೆ.

ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಸಾರವಾಗಿ ಮತ್ತು 2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಅನ್ವಯ, ಅಪಘಾತ ಸಂಭವಿಸಿದ ಸ್ಥಳಗಳಿಗೆ ಹತ್ತಿರುವ ಇರುವ ಸೂಕ್ತ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆಗೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾದ ‘ಗೋಲ್ಡನ್ ಅವರ್’ ಸೇರಿದಂತೆ ರಸ್ತೆ ಅಪಘಾತದ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆಯನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಅನುರಾಗ್ ಜೈನ್ ಅವರು ತಿಳಿಸಿದ್ದಾರೆ.

ಜಗತ್ತಿನಲ್ಲೇ ಭಾರತವು ಅತಿ ಹೆಚ್ಚು ರಸ್ತೆ ಅಪಘಾತ ಸಾವು ನೋವುಗಳಿಗೆ ಸಾಕ್ಷಿಯಾಗುತ್ತಿದೆ. ಹಾಗಾಗಿ, 2030ರ ಹೊತ್ತಿಗೆ ರಸ್ತೆ ಅಪಘಾತಗಳಲ್ಲಿನ ಸಾವಿನ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು 5 E ಗಳಾದ ಎಜುಕೇಷನ್(Education), ಎಂಜಿನಿಯರಿಂಗ್ (Engineering), ಎನ್‌ಫೋರ್ಸ್‌ಮೆಂಟ್ (Enforcement) ಮತ್ತು ಎರ್ಮೆಜೆನ್ಸಿ ಕೇರ್(Emergency Care) ರಸ್ತೆ ಸುರಕ್ಷತಾ ಜಾಗೃತಿಯನ್ನು ಕೈಗೊಳ್ಳುತ್ತಿದೆ. ಸುರಕ್ಷತಾ ಕ್ರಮಗಳನ್ನು ಯೋಜನಾ ಹಂತದಲ್ಲಿ ರಸ್ತೆ ವಿನ್ಯಾಸದಲ್ಲಿ ಅಳವಡಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ವಿವರವಾದ ಅಪಘಾತ ವರದಿ (ಇ-ಡಿಎಆರ್) ಯೋಜನೆಯು ರಾಷ್ಟ್ರವ್ಯಾಪಿ ರಸ್ತೆ ಅಪಘಾತಗಳ ದತ್ತಾಂಶಗಳ ವರದಿ, ನಿರ್ವಹಣೆ ಮತ್ತು ವಿಶ್ಲೇಷಣೆಯನ್ನು ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ.

ರಸ್ತೆ ಸುರಕ್ಷತೆಯ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯದ ಬಗ್ಗೆ ಎತ್ತಿ ಹೇಳಿದೆ ಕಾರ್ಯದರ್ಶಿ ಜೈನ್ ಅವರು, ಶಾಲೆ ಮತ್ತು ಕಾಲೇಜು ಪಠ್ಯಕ್ರಮಗಳಲ್ಲಿ ರಸ್ತೆ ಸುರಕ್ಷತೆಯನ್ನು ಸೇರ್ಪಡೆ ಮಾಡಲು ಈಗಾಗಲೇ ಶಿಕ್ಷಣ ಸಚಿವಾಲಯವು ತನ್ನ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.

ಮುಂಬರುವ “ಗ್ಲೋಬಲ್ ರೋಡ್ ಸೇಫ್ಟಿ ಇನಿಶಿಯೇಟಿವ್” ಎಂಬ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಕಾರ್ಯಕ್ರಮವು 27 ದೇಶಗಳ 130 ಪ್ರಖ್ಯಾತ ರಸ್ತೆ ಸುರಕ್ಷತಾ ತಜ್ಞರ ಭಾಗವಹಿಸುವುದಕ್ಕೆ ಸಾಕ್ಷಿಯಾಗಲಿದೆ. ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳು ಮತ್ತು ನಗರಗಳಲ್ಲಿ ರಸ್ತೆ ಅಪಘಾತದ ಸಾವುಗಳು ಮತ್ತು ಗಾಯಗಳನ್ನು ಕಡಿಮೆ ಮಾಡುವ ಗುರಿ ಕುರಿತು ಚರ್ಚಿಸುವುದು ಮತ್ತು ಅಂತಿಮಗೊಳಿಸುವುದು ಈ ಉಪಕ್ರಮದ ಮೊದಲ ಆದ್ಯತೆಯಾಗಿದೆ. 2024ರ ಮಾರ್ಚ್ ತಿಂಗಳಲ್ಲಿ ಜೀನಿವಾದಲ್ಲಿ ನಡೆಯಲಿರುವ ಗ್ಲೋಬಲ್ ಫೋರ್ ಫಾರ್ ರೋಡ್ ಟ್ರಾಫಿಕ್ ಸೆಫ್ಟಿ ಸೆಷನ್‌ನಲ್ಲಿ ಈ ಉಪಕ್ರಮದ ಪರಿಣಾಮಗಳ ಕುರಿತು ಚರ್ಚಿಸುವ ಸಾಧ್ಯತೆಗಳಿವೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ದಿಗಿಲು ಹುಟ್ಟಿಸುತ್ತಿರುವ ರಸ್ತೆ ಅಪಘಾತಗಳು, ತಪ್ಪಿತಸ್ಥ ಚಾಲಕರಿಗೆ ಕಠಿಣ ಶಿಕ್ಷೆಯಾಗಬೇಕು

Exit mobile version