ನವದೆಹಲಿ: ಸಲಿಂಗಿಗಳ ಹಕ್ಕುಗಳು, ಹಿಂದು ಧರ್ಮದ ಸಾಮರಸ್ಯದ ಕುರಿತು ಕೆಲವು ದಿನಗಳ ಹಿಂದಷ್ಟೇ ಮಾತನಾಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರೀಗ ಜಾತಿ ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ದೇವರ ಎದುರು ಎಲ್ಲರೂ ಸಮಾನರು. ಪುರೋಹಿತರು ಜಾತಿಪದ್ಧತಿಯನ್ನು ಹುಟ್ಟುಹಾಕಿದ್ದು ತಪ್ಪು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನಾವು ಯಾವಾಗ ದುಡಿಯುತ್ತೇವೆಯೋ, ಹಣ ಗಳಿಸುತ್ತೇವೆಯೋ, ಅಲ್ಲಿಂದ ಸಮಾಜದ ಕಡೆಗೆ ನಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ನಮ್ಮ ಕೆಲಸವು ಸಮಾಜಕ್ಕಾಗಿಯೇ ಇರುವಾಗ ಯಾವ ಕೆಲಸವೂ ಸಣ್ಣದು ಅಥವಾ ದೊಡ್ಡದು ಎಂಬುದು ಇರುವುದಿಲ್ಲ. ದೇವರು ಎಲ್ಲರನ್ನೂ ಸಮಾನರಾಗಿಯೇ ಸೃಷ್ಟಿಸಿದ್ದಾರೆ. ಆದರೆ, ಪುರೋಹಿತರು ಜಾತಿ, ಪಂಥಗಳ ವ್ಯವಸ್ಥೆಯನ್ನು ಹುಟ್ಟುಹಾಕಿದರು. ಇದು ಸರಿಯಲ್ಲ” ಎಂದು ಮುಂಬೈನಲ್ಲಿ ಆಯೋಜಿಸಿದ್ದ ಸಂತ ರೋಹಿದಾಸ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು.
”’ದೇವರು ಯಾರನ್ನೂ ಮೇಲು-ಕೇಳು ಎಂದು ಭಾವಿಸುವುದಿಲ್ಲ. ವಿವೇಕ, ಚೈತನ್ಯಕ್ಕೆ ಯಾವ ಧರ್ಮ, ಪಂಥದ ಹಂಗೂ ಇಲ್ಲ. ಇದನ್ನು ಅರಿತುಕೊಂಡು ಎಲ್ಲರೂ ಸಮಾನತೆಯ ಕಡೆ ಸಾಗಬೇಕು” ಎಂದು ತಿಳಿಸಿದರು. ಸಂತ ರೋಹಿದಾಸ ಅವರ ಕೊಡುಗೆಗಳನ್ನು ಮೋಹನ್ ಭಾಗವತ್ ಸ್ಮರಿಸಿದರು. ಛತ್ರಪತಿ ಶಿವಾಜಿ ಅವರು ಮಾಡಿದ ಧರ್ಮ ರಕ್ಷಣೆಯನ್ನೂ ಕೊಂಡಾಡಿದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ | ಆರೆಸ್ಸೆಸ್‌ನ ಸಮಕಾಲೀನ ಸ್ಪಂದನ ಬಿಂಬಿಸಿದ ಮೋಹನ್ ಭಾಗವತ್