ಬಾಲಾಸೋರ್, ಒಡಿಶಾ: 288 ಪ್ರಯಾಣಿಕರನ್ನು ಬಲಿ ಪಡೆದ ರೈಲು ಅಪಘಾತಕ್ಕೆ (Odisha Train Accident) ಕಾರಣ ಏನೆಂದು ಗೊತ್ತಾಗಿದೆ ಮತ್ತು ಈ ಘಟನೆಗೆ ಕಾರಣರಾದವರು ಯಾರೆಂದು ಪತ್ತೆ ಹಚ್ಚಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Railway Minister Ashwini Vaishnaw) ಹೇಳಿದ್ದಾರೆ. ಶುಕ್ರವಾರ ಸಂಜೆ ಒಡಿಶಾದ ಬಾಲಾಸೋರ್ ಜಿಲ್ಲೆ ಬಹನಾಗಾ ಎಂಬಲ್ಲಿ ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ, 288 ಮಂದಿ ಮೃತಪಟ್ಟು, 1100ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಪ್ರಧಾನಿ ಮೋದಿ ಸೇರಿ ಹಲವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈಲ್ವೇ ಸುರಕ್ಷತಾ ಆಯುಕ್ತರ ರೈಲು ಅಪಘಾತ ಕುರಿತು ತಮ್ಮ ತನಿಖೆಯನ್ನು ಮಾಡಿದ್ದಾರೆ. ಈ ರೈಲು ಅಪಘಾತಕ್ಕೆ ಏನು ಕಾರಣ ಮತ್ತು ಯಾರಿಂದ ಆಯಿತು ಎಂಬ ಮಾಹಿತಿ ದೊರೆತಿದೆ. ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಬದಲಾವಣೆಯಿಂದಾಗಿ ಈ ಘಟನೆ ಸಂಭವಿಸಿದೆ. ಈಗ ನಮ್ಮ ಗಮನ ಅದನ್ನು ಪುನರ್ ಪ್ರತಿಷ್ಠಾಪಿಸುವುದರ ಮೇಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣನ್ ಅವರು ಹೇಳಿದ್ದಾರೆ.
ಅಪಘಾತದಿಂದ ಹಾಳಾಗಿರುವ ರೈಲು ಹಳಿಗಳನ್ನು ಪುನರ್ ಜೋಡಿಸುವ ಕೆಲಸವು ಭರದಿಂದ ಸಾಗಿದೆ ಎಂದು ರೈಲ್ವೆ ಇಲಾಖೆಯು ಶನಿವಾರವಷ್ಟೇ ಟ್ವೀಟ್ ಮಾಡಿತ್ತು. ಅಪಘಾತದ ಸ್ಥಳದಲ್ಲಿದ್ದ ಬಹುತೇಕ ರೈಲ್ವೆ ಅವಶೇಷಗಳನ್ನು ತೆಗೆಯಲಾಗಿದೆ. ಬುಲ್ಡೋಜರ್‌ಗಳು ಮತ್ತು ಕ್ರೇನ್‌ಗಳ ನಿರ್ವಹಣಾ ತಂಡವು ತಂಡವು ರಾತ್ರೋರಾತ್ರಿ ಧ್ವಂಸಗೊಂಡ ರೈಲ್ವೇ ಬೋಗಿಗಳನ್ನು ಸ್ಥಳದಿಂದ ತೆಗೆಯಲಾಗಿದೆ. ಇದರಿಂದಾಗಿ ಪೂರ್ವ ಮತ್ತು ದಕ್ಷಿಣ ಭಾರತವನ್ನು ಸಂಪರ್ಕಿಸುವ ಮುಖ್ಯ ಟ್ರಂಕ್ ಲೈನ್‌ನಲ್ಲಿ ರೈಲ್ವೆ ಸೇವೆಗಳನ್ನು ಮರುಸ್ಥಾಪಿಸಲಾಗುತ್ತಿದೆ.
ಈ ಮಧ್ಯೆ, ಏಮ್ಸ್‌ನ ತಜ್ಞರು ಹಾಗೂ ವೈದ್ಯರ ತಂಡವು ನೆರವಿಗೆ ಧಾವಿಸಿದೆ. ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರತೀಯ ವಾಯು ಪಡೆಯ ವಿಮಾನಗಳ ಮೂಲಕ ದಿಲ್ಲಿಯಿಂದ ಭುವನೇಶ್ವರಕ್ಕೆ ಆಗಮಿಸಿದ ಈ ತಂಡವು ವಿವಿಧ ಆಸ್ಪತ್ರೆಗಳಲ್ಲಿ ಪರೀಕ್ಷೆ ನಡೆಸುತ್ತಿದೆ.
ಇದನ್ನೂ ಓದಿ: Odisha Train Accident: ರೈಲು ಅಪಘಾತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ, ಪ್ರಧಾನಿ ಮೋದಿ ಕಿಡಿಕಿಡಿ
ಮತ್ತೊಂದೆಡೆ, ಅಪಘಾತದ ಹಿನ್ನೆಲೆಯಲ್ಲೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು, “ನಮ್ಮ ರೈಲು ವ್ಯವಸ್ಥೆ ಸುರಕ್ಷಿತವಾಗಿದೆ. ಮತ್ತು ಯಾವುದೇ ಭೀಕರ ಅಪಘಾತ ಸಂಭವಿಸುವುದಿಲ್ಲ ಎಂದು ರೈಲ್ವೆ ಸಚಿವರು ಪದೇ ಪದೇ ಹೇಳುತ್ತಿದ್ದರು. ಹಾಗಿದ್ದೂ ಈ ಅಪಘಾತ ಹೇಗೆ ಸಂಭವಿಸಿತು. ಅಶ್ವಿನಿ ವೈಷ್ಣವ್ ಒಡಿಶಾ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಜೀನಾಮೆ ನೀಡಿದ ಉದಾಹರಣೆಗಳು ನಮ್ಮ ಮುಂದಿವೆ ಎಂದು ಟ್ವೀಟ್ ಮಾಡಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.