ನವದೆಹಲಿ: ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ(Central Bureau of Investigation – CBI)ವು ರೈಲ್ವೆ ಇಲಾಖೆಯ ಸೀನಿಯರ್ ಸೆಕ್ಷನ್ ಎಂಜಿನಿಯರ್ (ಸಿಗ್ನಲ್) ಅರುಣ್ ಕುಮಾರ್ ಮಹಂತಾ, ಸೆಕ್ಷನ್ ಎಂಜಿನಿಯರ್ ಮೊಹಮ್ಮದ್ ಅಮಿರ್ ಖಾನ್ ಮತ್ತು ಟೆಕ್ನಿಷಿಯನ್ ಪಪ್ಪು ಕುಮಾರ್ ಎಂಬ ಮೂವರನ್ನು ಅರೆಸ್ಟ್ ಮಾಡಿದೆ. ಈ ಮೂವರ ವಿರುದ್ಧ ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ ಮತ್ತು ಸಾಕ್ಷಿಗಳ ನಾಶದ ಆರೋಪವನ್ನು ಹೊರಿಸಲಾಗಿದೆ. ಕಳೆದ ತಿಂಗಳು ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ 293 ಪ್ರಯಾಣಿಕರು ಮೃತಪಟ್ಟು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು(Odisha Train Tragedy).
ತನಿಖೆಯ ವೇಳೆ, ಈ ಮೂವರ ಕೈಗೊಂಡ ಕ್ರಮಗಳು ಅಪಘಾತಕ್ಕೆ ಕಾರಣವಾಗಿದೆ. ಸಂಭಾವ್ಯ ದುರಂತದ ಬಗ್ಗೆ ಅವರಿಗೆ ತಿಳಿದಿತ್ತು. ಆದರೆ, ಅವರ ಉದ್ದೇಶ ಕೊಲೆ ಮಾಡಿರುವುದು ಆಗಿರಲಿಲ್ಲ. ಹಾಗಾಗಿ ಅವರ ವಿರುದ್ಧ ಕೊಲೆಗೆ ಸಮಾನವಲ್ಲದ ಅಪರಾಧ ನರಹತ್ಯೆಯ ಆರೋಪವನ್ನು ಹೊರಿಸಲಾಗಿದೆ ಎಂದು ಸಿಬಿಐ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ಅವರ ಕೊಲೆಯ ಉದ್ದೇಶವನ್ನು ಹೊಂದಿದ್ದರೆ ಅವರ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತಕ್ಕೆ ಮಾನವ ಪ್ರಮಾದವೇ ಕಾರಣ ಎಂದ ತನಿಖೆ, ಯಾರು ಆ ವ್ಯಕ್ತಿ?
ಅಪಘಾತದ ಬಗ್ಗೆ ತನಿಖೆ ನಡೆಸುತ್ತಿರುವ ರೈಲ್ವೆ ಸುರಕ್ಷತಾ ಆಯುಕ್ತರು ಕಳೆದ ವಾರ ಸಿಗ್ನಲಿಂಗ್ ವಿಭಾಗದ ಕಾರ್ಮಿಕರ ಮಾನವ ದೋಷವೇ ಅಪಘಾತಕ್ಕೆ ಕಾರಣವಾಗಿದೆ ಎಂದು ಗುರುತಿಸಿದ್ದರು. ವಿಧ್ವಂಸಕ ಅಥವಾ ತಾಂತ್ರಿಕ ದೋಷ ಅಥವಾ ಯಂತ್ರದ ದೋಷದ ಸಾಧ್ಯತೆಯಿಂದಾಗಿ ರೈಲು ಅಪಘಾತವಾಗಿದೆ ಎಂಬುದನ್ನು ತಳ್ಳಿ ಹಾಕಿದ್ದರು.
ಮೂರು ವರ್ಷಗಳ ಹಿಂದೆ ಸುರಕ್ಷತೆಯ ಕಾರಣದಿಂದ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಿದ ನಂತರ, ತಪಾಸಣೆಯ ಸಾಕಷ್ಟು ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸದ ಕೆಲವು ಗ್ರೌಂಡ್ ಅಧಿಕಾರಗಳ ನಿರ್ಲಕ್ಷ್ಯವನ್ನು ಸಿಎಸ್ಆರ್ ತನ್ನ ವರದಿಯಲ್ಲಿ ತಿಳಿಸಿತ್ತು. ಈಗ ಸಿಬಿಐ ಕೂಡ ಮೂವರು ಅಧಿಕಾರಿಗಳನ್ನು ಬಂಧಿಸಿ, ಅವರ ವಿರುದ್ಧ ಕೊಲೆಗೆ ಸಮಾನವಲ್ಲದ ನರಹತ್ಯೆ ಆರೋಪವನ್ನು ಹೊರಿಸಿರುವುದು ಸಿಎಸ್ಆರ್ ವರದಿಯನ್ನು ಪುಷ್ಟಿಕರಿಸುತ್ತಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.