ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ (Liquor Policy Case) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ಸುಮಾರು 9 ಗಂಟೆಗಳ ಕಾಲ ಕೇಜ್ರಿವಾಲ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ದೆಹಲಿ ಸಿಎಂಗೆ ಅವರು 56 ಪ್ರಶ್ನೆಗಳನ್ನು ಕೇಳಿದ್ದಾರೆ. ಸತತ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, “ಇದೊಂದು ನಕಲಿ ಕೇಸ್” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಿಬಿಐ ಅಧಿಕಾರಿಗಳು ನನಗೆ 56 ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಗಳಲ್ಲಿ ಹುರುಳಿರಲಿಲ್ಲ. ಇಡೀ ಪ್ರಕರಣವೇ ನಕಲಿಯಾಗಿದೆ. ನಮ್ಮ ವಿರುದ್ಧ ಅವರ ಬಳಿ ಯಾವುದೇ ಸಾಕ್ಷ್ಯ ಇಲ್ಲ. ಸಾಕ್ಷ್ಯ ಇರಲು ಸಾಧ್ಯವೂ ಇಲ್ಲ. ನಕಲಿ ಪ್ರಕರಣದಲ್ಲಿ ಅವರು ವಿರುದ್ಧ ಏನನ್ನೂ ಸಾಧಿಸಲು ಆಗುವುದಿಲ್ಲ” ಎಂದು ಹೇಳಿದರು. ದೆಹಲಿಯ ಲೋಧಿ ರಸ್ತೆಯಲ್ಲಿರುವ ಸಿಬಿಐ ಕೇಂದ್ರ ಕಚೇರಿಯಲ್ಲಿ 9 ಗಂಟೆ ವಿಚಾರಣೆ ಬಳಿಕ ಕೇಜ್ರಿವಾಲ್ ಸುದ್ದಿಗೋಷ್ಠಿ ನಡೆಸಿದರು. ಆದಾಗ್ಯೂ, ಮತ್ತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಕೇಜ್ರಿವಾಲ್ ಅವರಿಗೆ ಸಿಬಿಐ ಸಮನ್ಸ್ ನೀಡಿಲ್ಲ ಎಂದು ತಿಳಿದುಬಂದಿದೆ.
ವಿಚಾರಣೆ ಬಳಿಕ ಕೇಜ್ರಿವಾಲ್ ಸುದ್ದಿಗೋಷ್ಠಿ
ವಿಧಾನಸಭೆಯಲ್ಲೂ ಚರ್ಚಿಸುತ್ತೇವೆ
“ದೆಹಲಿಯಲ್ಲಿ ಅಬಕಾರಿ ನೀತಿ ಜಾರಿಯಿಂದ ಹಿಡಿದು, ಅದನ್ನು ರದ್ದುಗೊಳಿಸುವರೆಗೆ ಎಲ್ಲದರ ಕುರಿತು ಸಿಬಿಐ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ನಾನು ಉತ್ತರ ನೀಡಿದ್ದೇನೆ. 2020ರಿಂದ ಇದುವರೆಗೆ ಏನೇನಾಯಿತು ಎಂಬುದರ ಬಗ್ಗೆಯೂ ಕೇಳಿದ್ದಾರೆ. ಈ ಕುರಿತು ನಾವು ಇಲ್ಲಿಗೇ ಸುಮ್ಮನಾಗುವುದಿಲ್ಲ. ಸೋಮವಾರ (ಮಾರ್ಚ್ 16) ಕರೆದಿರುವ ವಿಧಾನಸಭೆ ವಿಶೇಷ ಅಧಿವೇಶನದಲ್ಲಿಯೂ ಈ ಕುರಿತು ಚರ್ಚಿಸಲಾಗುವುದು” ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಸತತವಾಗಿ ವಿಚಾರಣೆ ನಡೆಸುತ್ತಲೇ ಆಪ್ ನಾಯಕರಿಗೆ ಬಂಧನದ ಭೀತಿಯುಂಟಾಯಿತು. ಅದಕ್ಕಾಗಿ ಅವರು ತುರ್ತು ಸಭೆ ನಡೆಸಿದರು. ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು. ಇದೇ ವೇಳೆ ಆಪ್‌ನ ಹಲವು ನಾಯಕರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಯಿತು. ಭಾನುವಾರ ಬೆಳಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಸಿಬಿಐ ಕಚೇರಿಗೆ ಹೋಗುವ ಮುನ್ನ, ದಿಲ್ಲಿಯಲ್ಲಿರುವ ರಾಜಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ನಮಿಸಿದರು. ಪಂಜಾಬ್ ಸಿಎಂ ಭಗವಂತ್ ಮಾನ್, ಆಪ್ ಎಂಪಿ ಸಂಜಯ್ ಸಿಂಗ್ ಸೇರಿ ಹಲವರು ಜತೆಗಿದ್ದರು.
ಅಬಕಾರಿ ನೀತಿ ಜಾರಿ ವೇಳೆ ಅಕ್ರಮ ನಡೆದಿದೆ ಎಂಬ ಆರೋಪದಲ್ಲಿ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನೂ ಸಿಬಿಐ ಹಲವು ಬಾರಿ ವಿಚಾರಣೆ ನಡೆಸಿ, ಕೊನೆಗೆ ಬಂಧಿಸಿದೆ. ಕೇಜ್ರಿವಾಲ್ ಅವರನ್ನೂ ವಿಚಾರಣೆಗೆ ಕರೆದು, ಬಳಿಕ ಬಂಧಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದ ಕಾರಣ ಆಪ್ ನಾಯಕರು ತೀವ್ರ ಪ್ರತಿಭಟನೆ ನಡೆಸಿದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Delhi Liquor Policy Case: ಸಿಬಿಐನಿಂದ ಕೇಜ್ರಿವಾಲ್ ವಿಚಾರಣೆ, ಬಂಧನದ ಭೀತಿ? ಆಪ್ ತುರ್ತು ಸಭೆ