Site icon Vistara News

Jet Airways: ಕೆನರಾ ಬ್ಯಾಂಕ್​ಗೆ 538 ಕೋಟಿ ರೂ. ವಂಚನೆ; ಜೆಟ್​ ಏರ್​ ವೇ ಸಂಸ್ಥಾಪಕನ ವಿರುದ್ಧ ಸಿಬಿಐ ತನಿಖೆ ಪ್ರಾರಂಭ

Naresh Goyal

ವಿಮಾನಯಾನ ಸಂಸ್ಥೆ ಜೆಟ್​ ಏರ್ ವೇ (Jet Airways) ಸಂಸ್ಥಾಪಕ ನರೇಶ್​ ಗೋಯಲ್ (Naresh Goyal)​ ಮತ್ತು ಅವರ ಪತ್ನಿ ಅನಿತಾ ಗೋಯಲ್​ ವಿರುದ್ಧ ಸಿಬಿಐ (CBI) ತನಿಖೆ ಪ್ರಾರಂಭಿಸಿದೆ. ಕೆನರಾ ಬ್ಯಾಂಕ್​​ಗೆ 538 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದಡಿ ಸಿಬಿಐ ಇಂದು ದಂಪತಿ ವಿರುದ್ಧ ಕೇಸ್​ ದಾಖಲು ಮಾಡಿದೆ. ಅಷ್ಟೇ ಅಲ್ಲ, ಮುಂಬಯಿಯಲ್ಲಿ ನರೇಶ್ ಮತ್ತು ಅವರ ಪತ್ನಿ ಅನಿಯಾ ಗೋಯಲ್​ಗೆ ಸೇರಿದ ಒಟ್ಟು ಏಳು ಸ್ಥಳಗಳಲ್ಲಿ ರೇಡ್​ ಮಾಡಿದೆ. ನರೇಶ್​ ಗೋಯೆಲ್ ಮನೆ, ಕಚೇರಿಗಳಲ್ಲೆಲ್ಲ ಪರಿಶೋಧ ನಡೆಸಿದೆ. ಹಾಗೇ, ಜೆಟ್​ ಏರ್​​ ವೇ ಮಾಜಿ ನಿರ್ದೇಶಕ ಗೌರಂಗ್​ ಆನಂದ ಶೆಟ್ಟಿಗೆ ಸಂಬಂಧಪಟ್ಟ ಕೆಲವು ಸ್ಥಳಗಳಲ್ಲೂ ಹುಡುಕಾಟ ನಡೆಸಿದೆ.

1992ರಿಂದ ಪ್ರಾರಂಭವಾದ ಜೆಟ್​ ಏರ್​ ವೇ ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಖಾಸಗಿ ಏರ್​ಲೈನ್​ ಆಗಿತ್ತು. ಲಾಭದಲ್ಲೇ ನಡೆಯುತ್ತಿತ್ತು. ಆದರೆ 2019ರಲ್ಲಿ ಕಂಪನಿ ದಿವಾಳಿ ಘೋಷಣೆ ಮಾಡಿದ್ದಲ್ಲದೆ, ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತು. 2021ರ ಜೂನ್​​ನಲ್ಲಿ ಜೆಟ್ ಏರ್​ ವೇಯನ್ನು ಜಲನ್-ಕಾಲ್ರಾಕ್ ಒಕ್ಕೂಟ ಸ್ವಾಧೀನ ಪಡಿಸಿಕೊಂಡಿತು. ಇದರ ನೂತನ ಸಿಇಒ ಆಗಿ ಸಂಜೀವ್ ಕಪೂರ್ ನೇಮಕಗೊಂಡಿದ್ದಾರೆ. ಈ ವರ್ಷ ಅಂತ್ಯದ ವೇಳೆಗೆ ಜೆಟ್​ ಏರ್​ ವೇ ವಿಮಾನಗಳು ಮತ್ತೆ ಹಾರಾಟ ನಡೆಸಲಿವೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: Jet Airways CEO : ದುಬೈ ಮೆಟ್ರೊಗೆ ಬೆಂಗಳೂರು ಮೆಟ್ರೊ ಹೋಲಿಸಿ ಟೀಕಿಸಿದ ಜೆಟ್‌ ಏರ್‌ವೇಸ್‌ ಸಿಇಒ, ನೆಟ್ಟಿಗರ ತರಾಟೆ

ಈ ಮಧ್ಯೆ ಜೆಟ್​ ಏರ್​ ವೇ ವಿರುದ್ಧ ಕೆನರಾ ಬ್ಯಾಂಕ್​ ದೂರು ಕೊಟ್ಟು ‘ತಮಗೆ ಜೆಟ್​ ಏರ್​ ವೇ ಕಂಪನಿಯಿಂದ 538 ಕೋಟಿ ರೂ. ವಂಚನೆಯಾಗಿದೆ’ ಎಂದು ಹೇಳಿದೆ. ಜೆಟ್​ ಏರ್​ ವೇ ಹಣವನ್ನೆಲ್ಲ ಕೆಲವು ಅಕ್ರಮ ವ್ಯವಹಾರಗಳಲ್ಲಿ ಬಳಕೆ ಮಾಡಿಕೊಂಡಿದೆ ಎಂದು ಸಿಬಿಐ ತಿಳಿಸಿದೆ. ನರೇಶ್ ಗೋಯಲ್ ಅವರು ಸಂಸ್ಥೆಯ ಚೇರ್ಮನ್ ಆಗಿದ್ದಾಗ ನಡೆದ ಅವ್ಯವಹಾರ ಇದು. ಹೀಗಾಗಿ ಸಿಬಿಐ ನರೇಶ್ ಮತ್ತು ಅವರ ಪತ್ನಿ ವಿರುದ್ಧ ತನಿಖೆ ಶುರು ಮಾಡಿದೆ.

2019ರಲ್ಲಿ ಹಾರಾಟ ನಿಲ್ಲಿಸುವುದಕ್ಕೂ ಮೊದಲು ಜೆಟ್​ ಏರ್​ ವೇ ಹಲವು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಏರ್​ ಇಂಡಿಯಾ ಬಿಟ್ಟರೆ ಭಾರತ-ಯುಎಸ್​ ನಡುವೆ ವಿಮಾನ ನಿಗದಿ ಮಾಡಿದ ಏಕೈಕ ಸಂಸ್ಥೆಯಾಗಿತ್ತು. ಅಷ್ಟೇ ಅಲ್ಲ, ಇದರ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಉಳಿದೆಲ್ಲ ವಿಮಾನಗಳಿಗಿಂತಲೂ ಹೆಚ್ಚಿನ ಸೀಟ್​ಗಳು ಇದ್ದವು.

Exit mobile version