ನವದೆಹಲಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ (Cash for Query Case) ಸ್ವೀಕರಿಸಿದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ (TMC MP Mahua Moitra) ಅವರಿಗೆ ಸಂಕಷ್ಟ ಎದುರಾಗಿದೆ. ಈ ಭ್ರಷ್ಟಾಚಾರ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಲೋಕಪಾಲ್(Lokpal), ಕೇಂದ್ರ ತನಿಖಾ ದಳಕ್ಕೆ(CBI) ಸೂಚಿಸಿರುವ ಮಾಹಿತಿಯನ್ನು ಭಾರತೀಯ ಜನತಾ ಪಾರ್ಟಿಯ ಸಂಸದ ನಿಶಿಕಾಂತ್ ದುಬೆ (BJP MP Nishikant Dubey) ಅವರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ನಾನು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಲೋಕಪಾಲ್ ಸಂಸ್ಥೆಯು, ರಾಷ್ಟ್ರೀಯ ಭದ್ರತೆಗೆ ಸವಾಲೊಡ್ಡಿದ ಮಹುವಾ ಮೋಯಿತ್ರಾ ಅವರ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಕೈಗೊಳ್ಳುವಂತೆ ಕೇಂದ್ರ ತನಿಖಾ ದಳಕ್ಕೆ ಸೂಚಿಸಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಟ್ವೀಟ್ ಮಾಡಿದ್ದಾರೆ.
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರು ಎದುರಾಳಿ ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು.
लोकपाल ने आज मेरे कम्प्लेन पर आरोपी सांसद महुआ जी के राष्ट्रीय सुरक्षा को गिरवी रखकर भ्रष्टाचार करने पर CBI inquiry का आदेश दिया
— Dr Nishikant Dubey (@nishikant_dubey) November 8, 2023
ನೀತಿ ಸಮಿತಿ ಮುಂದೆ ಹಾಜರಾದ ಟಿಎಂಸಿ ಸಂಸದೆ ಮಹಿವಾ ಮೋಯಿತ್ರಾ
ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯೆ ಮಹುವಾ ಮೊಯಿತ್ರಾ (TMC MP Mahua Moitra) ಅವರು ‘ಪ್ರಶ್ನೆಗಾಗಿ ಲಂಚʼ ವಿವಾದದ ಪ್ರಕರಣದಲ್ಲಿ ವಿಚಾರಣೆಗಾಗಿ ಗುರುವಾರ ಕೆಳಮನೆಯ ನೀತಿ ಸಮಿತಿಯ (Lok Sabha Ethnics Committee) ಮುಂದೆ ಹಾಜರಾದರು.
ಭಾರತೀಯ ಜನತಾ ಪಕ್ಷದ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಮೊಯಿತ್ರಾ ವಿರುದ್ಧದ ʼಪ್ರಶ್ನೆಗಾಗಿ ಲಂಚʼದ ಆರೋಪ ಮಾಡಿದ್ದು, ಅದರ ಬಗ್ಗೆ ನೀತಿ ಸಮಿತಿ ತನಿಖೆ ನಡೆಸುತ್ತಿದೆ. ದೂರುದಾರರಲ್ಲಿ ಮಹುವಾ ಮೊಯಿತ್ರಾ ಅವರ ಮಾಜಿ ಸಂಗಾತಿ, ಮೋಯಿತ್ರಾ ಅವರಿಂದ ʼಜಿಲ್ಟೆಡ್ ಎಕ್ಸ್’ (ತಿರುಗಿಬಿದ್ದ ಪ್ರಿಯಕರ) ಎಂದು ಕರೆಸಿಕೊಂಡಿರುವ ವಕೀಲ ಜೈ ಅನಂತ್ ದೆಹದ್ರೈ ಕೂಡ ಇದ್ದಾರೆ. ದುಬೈ ಮೂಲದ ಖ್ಯಾತ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಪಡೆದು ಮೊಯಿತ್ರಾ ಅವರು ತಮ್ಮ ಸಂಸದೀಯ ಖಾತೆಯ ಮೂಲಕ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.
ʼಕ್ಯಾಶ್ ಫಾರ್ ಕ್ವೆಶ್ಚನ್’ ಪ್ರಕರಣದ ಹೊರತಾಗಿಯೂ ಮಹುವಾ ಮೊಯಿತ್ರಾ ಮತ್ತು ಜೈ ಅನಂತ್ ಮತ್ತೊಂದು ಕಾನೂನು ಸಮರದಲ್ಲಿ ತೊಡಗಿದ್ದಾರೆ. ಅದು ಒಂದು ಸಾಕುನಾಯಿಯ ಮಾಲಿಕತ್ವಕ್ಕಾಗಿ. ರೋಟ್‌ವೀಲರ್ ನಾಯಿ ʼಹೆನ್ರಿʼಯ ಕಸ್ಟಡಿ ಪಡೆಯಲು ಇಬ್ಬರೂ ಹೋರಾಡುತ್ತಿದ್ದಾರೆ. ಇಬ್ಬರೂ ಜತೆಗಿದ್ದಾಗ ಸೇರಿ ಖರೀದಿಸಿದ ನಾಯಿ ಇದಾಗಿದ್ದು, ಸಂಬಂಧ ಮುರಿದುಬಿದ್ದ ನಂತರ ನಾಯಿಗಾಗಿ ಕಿತ್ತಾಡಿಕೊಂಡಿದ್ದಾರೆ. ತನ್ನ ನಾಯಿಯನ್ನು ಅಪಹರಿಸಲಾಗಿದೆ ಎಂದು ಇಬ್ಬರೂ ಪರಸ್ಪರ ದೂರಿಕೊಂಡಿದ್ದರು.
ʼʼತಾನು ಯಾರಿಗೂ ಹೆದರುವುದಿಲ್ಲ. ಯಾರಿಂದಲೂ ಹಿಂಸೆಗೆ ಒಳಗಾಗುವುದಿಲ್ಲ. ಯಾರಾದರೂ ತಾನು ಬಲಿಪಶು ಎಂದು ನಟಿಸಿ ಪ್ರಕರಣದ ನಿರೂಪಣೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ, ಇಡೀ ದೇಶವು ಅದನ್ನು ನೋಡುತ್ತಿದೆʼʼ ಎಂದು ಜೈ ಅನಂತ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಮಹುವಾ ಮೊಯಿತ್ರಾ ಅವರು ಕೆಲವು ಟಿವಿ ಸಂದರ್ಶನಗಳಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ಅವರು ದರ್ಶನ್ ಹಿರಾನಂದಾನಿಗೆ ತಮ್ಮ ಸಂಸತ್ತಿನ ಲಾಗಿನ್ ಅನ್ನು ನೀಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಸತ್ ಲಾಗಿನ್ ಮಾಹಿತಿ ರಹಸ್ಯವಾಗಿಲ್ಲದಿರುವುದರಿಂದ ಭದ್ರತೆಗೆ ಯಾವುದೇ ಬೆದರಿಕೆ ಇಲ್ಲ ಎಂದು ಮಹುವಾ ಮೊಯಿತ್ರಾ ಪ್ರತಿಪಾದಿಸಿದ್ದಾರೆ. ಇವರ ಖಾತೆಯನ್ನು ದುಬೈನಿಂದ ಲಾಗಿನ್ ಮಾಡಿದ ಆರೋಪವಿದ್ದು, ತಾನು ವಿದೇಶದಿಂದ ಅದನ್ನು ಪ್ರವೇಶಿಸಿದ್ದೇನೆ ಎಂದು ಮಹುವಾ ಹೇಳಿದ್ದಾರೆ.
ಆದರೆ ಇದಕ್ಕಾಗಿ ಯಾವುದೇ ನಗದು ವಿನಿಮಯ ನಡೆದಿಲ್ಲ, ಸಂಸದರಾಗುವ ಮುಂಚೆಯೇ ದರ್ಶನ್ ಅವರು ತನಗೆ ಸ್ಕಾರ್ಫ್, ಕೆಲವು ಮೇಕಪ್ ವಸ್ತುಗಳನ್ನು ನೀಡಿದ್ದರು ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ. ಅವರು ದೀರ್ಘಕಾಲದಿಂದ ತನ್ನ ಆಪ್ತ ಸ್ನೇಹಿತ ಎಂದು ವಿವರಿಸಿದ್ದಾರೆ. ಅದಾನಿ ಸಮೂಹವು ಈ ʼಬೋಗಸ್ ಆರೋಪʼಗಳ ಹಿಂದೆ ಇದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಹೇಳಿಕೊಂಡಿದ್ದಾರೆ. ಈ ಹಿಂದೆ ಅದಾನಿ ಸಮೂಹವನ್ನು ಮೋಯಿತ್ರಾ ಕಟುವಾಗಿ ಟೀಕಿಸಿದ್ದರು.
ಈ ಸುದ್ದಿಯನ್ನೂ ಓದಿ: MP Mahua Moitra: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಸ್ವೀಕರಿಸಿದ ಸಂಸದೆ ಮಹುವಾ ಮೋಯಿತ್ರಾ! ಬಿಜೆಪಿ ಆರೋಪ