Site icon Vistara News

Delhi Liquor Policy Case: ಸಿಬಿಐನಿಂದ ಕೇಜ್ರಿವಾಲ್ ವಿಚಾರಣೆ, ಬಂಧನದ ಭೀತಿ? ಆಪ್ ತುರ್ತು ಸಭೆ

CBI questioned delhi cm arvind kejriwal regarding Delhi Liquor Policy Case

ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಕೇಂದ್ರ ತನಿಖಾ ದಳ(CBI) ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದೆ. ಏತನ್ಮಧ್ಯೆ, ಕೇಜ್ರಿವಾಲ್ ಬಂಧನ ಭೀತಿಯ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ಪಕ್ಷದ ಸಭೆಯನ್ನು ತುರ್ತಾಗಿ ಭಾನುವಾರ ಸಾಯಂಕಾಲ ನಡೆಸಲಾಯಿತು(Delhi Liquor Policy Case).

ದಿಲ್ಲಿ ಸಿಬಿಐ ಕೇಂದ್ರ ಕಚೇರಿಯಲ್ಲಿ ಅರವಿಂದ್ ಕೇಜ್ರಿವಾಲ್ ವಿಚಾರಣೆ ಇನ್ನೂ ಮುಂದುವರಿದಿದೆ. ಈ ಹಿಂದೆಯೂ ಡಿಸಿಎಂ ಆಗಿದ್ದ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಕರೆದು ಬಳಿಕ ಸಿಬಿಐ ಬಂಧಿಸಿತ್ತು. ಅದೇ ರೀತಿ, ಈಗಲೂ ಆಗಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಆಪ್ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ಸಿಬಿಐ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರಾಘವ್ ಛಡ್ಡಾ, ಸಂಜಯ್ ಸಿಂಗ್ ಮತ್ತಿತರರನ್ನು ದಿಲ್ಲಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಬಿಜೆಪಿಗೆ ಕೇಜ್ರಿವಾಲ್ ಫೋಬಿಯಾ ಶುರುವಾಗಿದೆ. ಕೇಜ್ರಿವಾಲ್ ಭಯದಿಂದಾಗಿ ಬಿಜೆಪಿ ಇಂಥ ಕೀಳುಮಟ್ಟಕ್ಕೆ ಇಳಿದಿದೆ. ಇದೊಂದು ಹೇಡಿತನದ ಕೃತ್ಯ. ನಾವೇನೂ ಜೈಲಿಗೆ ಹೆದರುವುದಿಲ್ಲ ಎಂದು ರಾಘವ್ ಚಡ್ಡಾ ಅವರು ಹೇಳಿದ್ದಾರೆ.

ಬೆಳಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಸಿಬಿಐ ಕಚೇರಿಗೆ ಹೋಗುವ ಮುನ್ನ, ದಿಲ್ಲಿಯಲ್ಲಿರುವ ರಾಜಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ನಮಿಸಿದರು. ಪಂಜಾಬ್ ಸಿಎಂ ಭಗವಂತ್ ಮಾನ್, ಆಪ್ ಎಂಪಿ ಸಂಜಯ್ ಸಿಂಗ್ ಹಾಗೂ ಇತರರು ಹಾಜರಿದ್ದರು.

ಇದನ್ನೂ ಓದಿ: Aam Aadmi Party: ಎಎಪಿ ಭ್ರಷ್ಟಾಚಾರ ಸಹಿಸಲ್ಲ, ನನ್ನ ಮಗ ಭ್ರಷ್ಟಾಚಾರ ಮಾಡಿದರೂ ಜೈಲಿಗೆ ಹಾಕುವೆ: ಅರವಿಂದ್ ಕೇಜ್ರಿವಾಲ್

ಒಂದು ವೇಳೆ, ಭಾರತೀಯ ಜನತಾ ಪಕ್ಷವು ಆರ್ಡರ್ ಮಾಡಿದ್ದರೆ, ಕೇಂದ್ರ ತನಿಖಾ ದಳವು ತಮ್ಮನ್ನು ಬಂಧಿಸಬಹುದು ಎಂದು ಸಿಎಂ ಕೇಜ್ರಿವಾಲ್ ಅವರು ವಿಡಿಯೋ ಸಂದೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ನಡುವೆ ವಿಶೇಷ ಅಧಿವೇಶನ ಕರೆಯಲು ದಿಲ್ಲಿ ಲೆಫ್ಟಿನೆಂಟ್ ಗೌರ್ನರ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

Exit mobile version