ನವದೆಹಲಿ: ಚಂಡೀಗಢದ ಪೂಲೀಸ್ ದಂಪತಿ ಹರೀಂದರ್ ಸಿಂಗ್ ಸೆಖೋನ್ ಮತ್ತು ಪರಮ್ಜಿತ್ ಕೌರ್ ಸೆಖೋನ್ ಅವರ ಆಸ್ತಿ 4 ವರ್ಷಗಳಲ್ಲಿ (2017-2021) 13.22 ಲಕ್ಷ ರೂ.ಯಿಂದ ಬರೋಬ್ಬರಿ 1.85 ಕೋಟಿ ರೂ.ಗೆ ಏರಿಕೆಯಾಗಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಸಿಬಿಐ ತಿಳಿಸಿದೆ (CBI Raid).
ಎಫ್‌ಐಆರ್‌ನಲ್ಲಿ ಏನಿದೆ?
ಈ ಅವಧಿಯಲ್ಲಿ ದಂಪತಿ ಚಂಡೀಗಢದ ಸೆಕ್ಟರ್ 36ರಲ್ಲಿನ 1.28 ಕೋಟಿ ರೂ.ಗಳ ಮೌಲ್ಯದ ದೊಡ್ಡ ಮನೆಯಲ್ಲಿ ಪಾಲು ಹೊಂದಿದ್ದು, ಮುಲ್ಲನ್ಪುರ್ ಗರೀಬ್ದಾಸ್ ನ್ಯೂ ಚಂಡೀಗಢದಲ್ಲಿ 40.56 ಲಕ್ಷ ರೂ.ಗಳ ವಸತಿ ನಿವೇಶನ, 4,50,000 ರೂ.ಗಳ ಆಭರಣಗಳು ಮತ್ತು 5 ಲಕ್ಷ ರೂ.ಗಳ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇನ್ಸ್‌ಪೆಕ್ಟರ್ ಹರಿಂದರ್ ಸಿಂಗ್ ಸೆಖೋನ್ ಅವರು 2017 ಮತ್ತು 2021ರ ನಡುವೆ ಗಳಿಸಿದ 50 ಲಕ್ಷ ರೂ.ಗಳ ಒಟ್ಟು ವೇತನದ ಕನಿಷ್ಠ 1/3 ಭಾಗಕ್ಕೆ ಸಮನಾದ 10 ಲಕ್ಷ ರೂ.ಗಳನ್ನು ಅಡುಗೆ ಮನೆಯ ಪರಿಕರಗಳಿಗಾಗಿ ಮಾತ್ರ ಹಂಚಿಕೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ.
2017 ಮತ್ತು 2021ರ ನಡುವೆ ದಂಪತಿಯ ಆದಾಯದ ಮೂಲಗಳ ಪೈಕಿ 50 ಲಕ್ಷ ರೂ. ಸಂಬಳ, ರಾಜ್‌ದೀಪ್ ಕಂಪೆನಿ ಇನ್ಫ್ರಾಸ್ಟ್ರಕ್ಚರ್‌ನಿಂದ ಚೆಕ್ ಮೂಲಕ ಪಡೆದ 24.56 ಲಕ್ಷ ರೂ., ಹರಿಂದರ್ ಸೆಖೋನ್ ಹೆಸರಿನಲ್ಲಿ 65 ಲಕ್ಷ ರೂ.ಗಳ ಗೃಹ ಸಾಲ, ಎಸ್‌ಬಿಐ ಬ್ಯಾಂಕ್‌ನಿಂದ ಪರಮ್ಜಿತ್ ಕೌರ್ ಸೆಖೋನ್ ಅವರ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಗಳ ವರ್ಗಾವಣೆ, ಹರಿಂದರ್ ಸೆಖೋನ್ ಅವರ ಖಾತೆಯಲ್ಲಿ ಎರಡು ಅಪರಿಚಿತ ಚೆಕ್‌ಗಳ ಮೂಲಕ ಪಡೆದ 7 ಲಕ್ಷ ರೂ. ಮತ್ತು ಅಕೌಂಟೆಂಟ್ ಜನರಲ್ ಅವರಿಂದ 16.44 ಲಕ್ಷ ರೂ. ಕಂಡು ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೆಕ್ ಮೂಲಕ ವಿವಿಧ ವ್ಯಕ್ತಿಗಳಿಗೆ ನೀಡಿದ 41.42 ಲಕ್ಷ ರೂ., ವಿವಿಧ ಸಾಲ ಖಾತೆಗಳಿಗೆ ಪಾವತಿಸಿದ ಇಎಂಐಗಳ 14.14 ಲಕ್ಷ ರೂ., ಅಶ್ವನಿ ನಾಗ್ಪಾಲ್ ಮತ್ತು ಸಂಜೀವ್ ಸಂಭೇರ್ ಎಂಬ ಇಬ್ಬರು ವ್ಯಕ್ತಿಗಳಿಗೆ ವಿತರಿಸಲಾದ 17.50 ಲಕ್ಷ ರೂ., ಪರಮ್ಜಿತ್ ಕೌರ್ ಸೆಖೋನ್ ಅವರ ಖಾತೆಯಿಂದ ಎಸ್‌ಬಿಐ ಗೃಹ ಸಾಲಕ್ಕೆ 11 ಲಕ್ಷ ರೂ.ಗಳ ಮರುಪಾವತಿ ಸೇರಿದಂತೆ ದಂಪತಿ ಖರ್ಚು ಮಾಡಿದ 1.58 ಕೋಟಿ ರೂ.ಗಳ ವೆಚ್ಚವನ್ನು ಎಫ್ಐಆರ್‌ನಲ್ಲಿ ವಿವರಿಸಲಾಗಿದೆ.
ಸಿಬಿಐ ಅಧಿಕಾರಿ ಹೇಳಿದ್ದೇನು?
“ಆಗಸ್ಟ್ 2023ರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಪವನ್ ಕುಮಾರ್ ಮತ್ತು ಸ್ಥಳೀಯ ಬಿಜೆಪಿ ನಾಯಕ ಅನಿಲ್ ದುಬೆಯ ಸಹೋದರ ಮನೀಶ್ ದುಬೆ ಸೇರಿದಂತೆ ಮೂವರನ್ನು ಒಳಗೊಂಡ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಂದರ್ ಸಿಂಗ್ ಸೆಖೋನ್ ಅವರನ್ನು ಸಿಬಿಐ ಪ್ರಶ್ನಿಸಿದಾಗ ಅನುಮಾನ ಮೂಡಿತ್ತು. ಬಳಿಕ ನಡೆದ ತನಿಖೆಯಲ್ಲಿ ಅವರು ತಮ್ಮ ಪತ್ನಿ ಇನ್ಸ್‌ಪರಕ್ಟರ್ ಪರಮ್ಜಿತ್ ಕೌರ್ ಸೆಖೋನ್ ಅವರೊಂದಿಗೆ ಆದಾಯದ ಮೂಲಕ್ಕಿಂತ ಹೆಚ್ಚಿನ ಆಸ್ತಿಯನ್ನು ಸಂಪಾದಿಸಿದ್ದಾರೆ ಎನ್ನುವುದು ತಿಳಿದು ಬಂತುʼʼ ಎಂದು ಸಿಬಿಐಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: CBI Raids: ಕಾಯ್ದೆ ಉಲ್ಲಂಘನೆ ಆರೋಪ; ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ನಿವಾಸದಲ್ಲಿ ಸಿಬಿಐ ಶೋಧ
ಹರಿಂದರ್ ಸಿಂಗ್ ಸೆಖೋನ್ 1997ರ ಅಕ್ಟೋಬರ್‌ನಲ್ಲಿ ಚಂಡೀಗಢ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್ಐ) ಆಗಿ ಕರ್ತವ್ಯಕ್ಕೆ ಸೇರಿಕೊಂಡರು. ಅವರು 2005ರಲ್ಲಿ ಸಬ್ ಇನ್ಸ್‌ಪೆಕ್ಟರ್ (ಎಸ್ಐ) ಮತ್ತು 2015ರಲ್ಲಿ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಪಡೆದರು. ಪ್ರಸ್ತುತ ಅವರು ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪರಮ್ಜಿತ್ ಕೌರ್ ಸೆಖೋನ್ ಅವರು ಹರಿಂದರ್ ಸಿಂಗ್ ಸೆಖೋನ್ ಅವರ ಬ್ಯಾಚ್ ಮೇಟ್ ಆಗಿದ್ದರು. ಸದ್ಯ ಅವರನ್ನು ಟ್ರಾಫಿಕ್ ಪೊಲೀಸ್ ಆಗಿ ನಿಯೋಜನೆಗೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ