ಕೋಲ್ಕತ್ತಾ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ (Sandip Ghosh) ನಿವಾಸದ ಮೇಲೆ ಕೇಂದ್ರ ತನಿಖಾ ದಳ (Central Bureau of Investigation) ಭಾನುವಾರ (ಆಗಸ್ಟ್ 25) ದಾಳಿ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಇತರ 14 ಸ್ಥಳಗಳಲ್ಲಿಯೂ ಸಿಬಿಐ ಶೋಧ ನಡೆಸುತ್ತಿದೆ (CBI Raid).
ಕೋಲ್ಕತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ಆಗಸ್ಟ್ 9ರಂದು ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಸಿಬಿಐ ಈಗಾಗಲೇ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕೋಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಪಶ್ಚಿಮ ಬಂಗಾಳ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸುತ್ತಿದೆ.
#WATCH | Kolkata, West Bengal: CBI Anti Corruption Branch reached RG Kar Medical College and hospital ex-principal Sandip Ghosh's residence.
— ANI (@ANI) August 25, 2024
CBI started a corruption investigation against Sandeep Ghosh by filing an FIR, yesterday. pic.twitter.com/UlXn3wnUp3
ಸಿಬಿಐಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಧಿವಿಜ್ಞಾನ ಔಷಧ ತಜ್ಞ ಡಾ.ದೇಬಶಿಶ್ ಸೋಮ್ ಅವರ ನಿವಾಸದಲ್ಲಿಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಉಪ ಅಧೀಕ್ಷಕ ಅಖ್ತರ್ ಅಲಿ ಅವರು ಮೂರು ದಿನಗಳ ಹಿಂದೆ ಭ್ರಷ್ಟಾಚಾರ ಮತ್ತು ಅಕ್ರಮಗಳ ವಿರುದ್ಧ ದೂರು ದಾಖಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆ. ಈ ಮಧ್ಯೆ ಕೋಲ್ಕತಾ ಪೊಲೀಸರು ಸರ್ಕಾರಿ ಸ್ವಾಮ್ಯದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಬಳಿ ನಿಷೇಧಾಜ್ಞೆಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಈಗಾಗಲೇ ಸಿಬಿಐಗೆ ಹಸ್ತಾಂತರಿಸಿದೆ. ಜತೆಗೆ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅಧಿಕಾರಾವಧಿಯಲ್ಲಿ ನಡೆದ ಹಣಕಾಸು ಅಕ್ರಮಗಳ ತನಿಖೆಯನ್ನೂ ಸಿಬಿಐಗೆ ವರ್ಗಾಯಿಸಿದೆ. ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಅಖ್ತರ್ ಅಲಿ ಹೇಳಿದ್ದೇನು?
ಅಖ್ತರ್ ಅಲಿ ಅವರು ಸಂದೀಪ್ ಘೋಷ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಂದೀಪ್ ಘೋಷ್ ವಾರಸುದಾರರಿಲ್ಲದ ಶವಗಳನ್ನು ಅಕ್ರಮವಾಗಿ ಬಳಸಿದ್ದಾರೆ, ಬಯೋಮೆಡಿಕಲ್ ತ್ಯಾಜ್ಯವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ದೂರಿದ್ದಾರೆ. ಮಾತ್ರವಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು 5ರಿಂದ 8 ಲಕ್ಷ ರೂ.ಗಳವರೆಗೆ ಪಾವತಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದೂ ಅಲಿ ತಿಳಿಸಿದ್ದಾರೆ. ʼʼ2023ರಲ್ಲಿಯೇ ನಾನು ಈ ಬಗ್ಗೆ ದೂರು ನೀಡಿದ್ದೆ. ಆದರೆ ಕ್ರಮ ಕೈಗೊಂಡಿರಲಿಲ್ಲʼʼ ಎಂದು ಅಖ್ತರ್ ಅಲಿ ಹೇಳಿದ್ದಾರೆ. ಆಗಸ್ಟ್ 9ರಂದು 31 ವರ್ಷದ ವಿದ್ಯಾರ್ಥಿನಿಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಅಗಸ್ಟ್ 10ರಂದು ಡಾ.ಸಂದೀಪ್ ಘೋಷ್‌ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಹತ್ಯೆ; ಹಂತಕನ ಬಗ್ಗೆ ಸಹೋದರಿ ಬಿಚ್ಚಿಟ್ಟ ರಹಸ್ಯವೇನು?