Site icon Vistara News

CBI Raids: ಕಾಯ್ದೆ ಉಲ್ಲಂಘನೆ ಆರೋಪ; ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್‌ ನಿವಾಸದಲ್ಲಿ ಸಿಬಿಐ ಶೋಧ

harsha mandar

harsha mandar

ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಉಲ್ಲಂಘನೆಗೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ (Harsh Mander) ಅವರ ಕಚೇರಿ ಮತ್ತು ನಿವಾಸದಲ್ಲಿ ಕೇಂದ್ರ ತನಿಖಾ ದಳ (CBI) ಶುಕ್ರವಾರ (ಫೆಬ್ರವರಿ 2) ಶೋಧ ನಡೆಸಿದೆ.

ಹರ್ಷ ಮಂದರ್ ಸ್ಥಾಪಿಸಿದ ಸರ್ಕಾರೇತರ ಸಂಸ್ಥೆ (NGO) ಅಮನ್ ಬಿರಾದರಿ (Aman Biradari)ಗೆ ವಿದೇಶಿ ಧನ ಸಹಾಯ ಲಭಿಸಿದ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವಾಲಯ (MHA) ಕಳೆದ ವರ್ಷ ಸಿಬಿಐಗೆ ಶಿಫಾರಸು ಮಾಡಿತ್ತು. ಈ ಹಿಂದೆ 2021ರ ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪ್ರಾರಂಭಿಸಿದ ಅವ್ಯಹಾರಗಳ ತನಿಖೆಯ ನಂತರ ಮಂದರ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಇದೀಗ ತನಿಖೆಯು ಅವರಿಗೆ ಸಂಬಂಧಿಸಿದ ಎರಡು ಎನ್‌ಜಿಒಗಳ ಸುತ್ತ ಕೇಂದ್ರೀಕೃತವಾಗಿ ನಡೆಯಲಿದೆ. ವಿದೇಶಿ ದೇಣಿಗೆ ಪಡೆಯುವ ಎಲ್ಲ ಎನ್‌ಜಿಒಗಳು ಎಫ್‌ಸಿಆರ್‌ಎ ಅಡಿಯಲ್ಲಿ ಗೃಹ ಸಚಿವಾಲಯದಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ.

ವಾಗ್ದಾಳಿ ನಡೆಸಿದ ಪ್ರಶಾಂತ್ ಭೂಷಣ್

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಕೀಲ ಪ್ರಶಾಂತ್ ಭೂಷಣ್, ಸರ್ಕಾರದ ವಿರುದ್ಧ ವಿಮರ್ಶಾತ್ಮಕ ನಿಲುವು ಹೊಂದಿದ್ದರಿಂದ ಹರ್ಷ ಮಂದರ್ ಅವರನ್ನು ಗುರಿಯಾಗಿಸಿ ತನಿಖೆ ನಡೆಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ʼʼಹರ್ಷ ಮಂದರ್‌ ಅವರ ನಿವಾಸ ಮತ್ತು ಕಚೇರಿಯ ಮೇಲೆ ಸಿಬಿಐ ದಾಳಿ ನಡೆಸುತ್ತಿದೆ. ಹರ್ಷ ಮಂದರ್‌ ಮಾನವೀಯ ಮತ್ತು ಉದಾತ ವ್ಯಕ್ತಿತ್ವ ಹೊಂದಿರುವ ಹೋರಾಟಗಾರ. ಅವರು ದುರ್ಬಲ ಹಾಗೂ ಬಡವರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಕೇಂದ್ರ ಸರ್ಕಾರವನ್ನು ಟೀಕಿಸುವ ಕಾರಣಕ್ಕೆ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ. ತನ್ನನ್ನು ಟೀಕಿಸುವವರ ವಿರುದ್ಧ ಸರ್ಕಾರವು ದಾಳಿ ನಡೆಸುತ್ತಿದೆʼʼ ಎಂದು ಬರೆದುಕೊಂಡಿದ್ದಾರೆ.

ಯಾರು ಈ ಹರ್ಷ ಮಂದರ್ ?

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿದ್ದ ಮಂದರ್ ಲೇಖಕ, ಸಂಶೋಧಕ, ಶಿಕ್ಷಕ ಮತ್ತು ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಹರ್ಷ ಮಂದರ್ ಅವರು ಆಹಾರದ ಹಕ್ಕು, ಮಾಹಿತಿ ಹಕ್ಕು, ಜೀತದಾಳುಗಳು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಹರ್ಷ ಮಂದರ್ ಅವರು ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. Between Memory and Forgetting: Massacre and the Modi Years in Gujarat, Partitions of the Heart: Unmaking the Idea of India, The Right to Food Debates: Social Protection for Food Security in India ಮುಂತಾದವು ಹರ್ಷ ಮಂದರ್ ಅವರ ಜನಪ್ರಿಯ ಕೃತಿಗಳು.

ಇದನ್ನೂ ಓದಿ: ಉತ್ತರಾಖಂಡ ಸಿಎಂಗೆ ಇಂದು ಏಕರೂಪ ನಾಗರಿಕ ಸಂಹಿತೆ ಕರಡು ಹಸ್ತಾಂತರ; ಬಿಗಿ ಭದ್ರತೆ

Exit mobile version