ಚೆನ್ನೈ: ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ಪುತ್ರ, ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರಿಗೆ ಸಂಬಂಧಿಸಿದ ಒಂಬತ್ತು ಆಸ್ತಿಗಳ ಮೇಲೆ ಮಂಗಳವಾರ ಏಕಕಾಲದಲ್ಲಿ ಸಿಬಿಐ ದಾಳಿ ನಡೆದಿದೆ. ಇದರಲ್ಲಿ ಬೆಂಗಳೂರಿನ ಒಂದು ಕಚೇರಿಯೂ ಸೇರಿದೆ. ದಿಲ್ಲಿಯ ಒಂದು, ಚೆನ್ನೈಯ ಮೂರು, ಮುಂಬಯಿಯ ಮೂರು, ಪಂಜಾಬಿನ ಒಂದು ಮತ್ತು ಒಡಿಶಾದ ಒಂದು ಕಚೇರಿಗಳಿಗೆ ಏಕಕಾಲದಲ್ಲಿ ದಾಳಿ ನಡೆದಿದೆ.
ಕಾರ್ತಿ ಅವರು 2010 ಮತ್ತು 2014ರ ನಡುವೆ ವಿದೇಶದಿಂದ ಸ್ವೀಕರಿಸಿದ ದೊಡ್ಡ ಮೊತ್ತದ ಹಣಕ್ಕೆ ಸಂಬಂಧಿಸಿದ ಕೇಸಿನಲ್ಲಿ ಈ ದಾಳಿ ನಡೆದಿದೆ. ಕಾರ್ತಿ ಅವರು ಸಾಬು ಎಂಬ ವ್ಯಕ್ತಿಯಿಂದ 50 ಲಕ್ಷ ರೂ.ಯನ್ನು ಸ್ವೀಕರಿಸಿದ್ದರು ಎಂದು ಸಿಬಿಐ ಮೂಲಗಳು ತಿಳಿಸಿವೆ. ಅದರ ಜತೆಗೆ, ಯುಪಿಎ-2 ಸರಕಾರದಲ್ಲಿ ಪಿ. ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗ ಕಾರ್ತಿ ಚಿದಂಬರಂ ಅವರು 250 ಚೀನಾ ನಾಗರಿಕರಿಗೆ ವೀಸಾ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಹೊಸ ಕೇಸು ದಾಖಲಿಸಿಕೊಳ್ಳಲು ಸಿಬಿಐ ಮುಂದಾಗಿದೆ.
ಕಾರ್ತಿ ಚಿದಂಬರಂ ಅವರ ಮೇಲೆ ಸಿಬಿಐ ದಾಳಿ ನಡೆಯುವುದು ಇದು ಮೊದಲ ಸಲವೇನೂ ಅಲ್ಲ. 2019ರಲ್ಲಿ ಅವರಿಗೆ ಸೇರಿದ 16 ಆಸ್ತಿಗಳ ಮೇಲೆ ಸಿಬಿಐ ರೇಡ್ ನಡೆದಿತ್ತು. 2007ರಲ್ಲಿ ಯುಪಿಎ ಸರಕಾರವಿದ್ದಾಗ ಕೇಂದ್ರದ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಮೂಲಕ ಮಾಧ್ಯಮ ವಲಯಕ್ಕೆ ವಿದೇಶಿ ಹೂಡಿಕೆಗೆ ಅವಕಾಶ ನೀಡುವಲ್ಲಿ ದೊಡ್ಡ ಮೊತ್ತದ ಲಂಚ ಸ್ವೀಕರಿಸಿದ್ದಾರೆಂದು ಆರೋಪಿಸಲಾಗಿತ್ತು. ಐಎನ್‌ಎಕ್ಸ್ ಮೀಡಿಯಾಕ್ಕೆ ಈ ಅನುಮತಿ ನೀಡಲಾಗಿತ್ತು.
ಲೋಧಿ ಎಸ್ಟೇಟ್‌ಗೆ ಲಗ್ಗೆ..
ಚಿದಂಬರಂ ಅವರಿಗೆ ಸೇರಿದ ದಿಲ್ಲಿಯ 80, ಲೋಧಿ ಎಸ್ಟೇಟ್‌ಗೆ ಮಂಗಳವಾರ ಮುಂಜಾನೆ 7.30ರ ಹೊತ್ತಿಗೆ ಏಳು ಮಂದಿಯ ಸಿಬಿಐ ಟೀಮ್ ಲಗ್ಗೆ ಇಟ್ಟಿತ್ತು. ಅಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದ ತಂಡ ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದೆ ಎಂದು ಮೂಲಗಳು ತಿಳಿಸಿವೆ. ದಾಳಿಯ ವೇಳೆ ಕಾರ್ತಿ ಚಿದಂಬರಂ ಅವರು ಮನೆಯಲ್ಲಿ ಇರಲಿಲ್ಲ.
ತೃಣಮೂಲ ಮುಖಂಡನ ಹತ್ಯೆ ಪ್ರಕರಣವೂ ಸಿಬಿಐಗೆ
ಎಷ್ಟು ಬಾರಿ ದಾಳಿಯೋ, ಲೆಕ್ಕ ತಪ್ಪಿದೆ!
ಈ ನಡುವೆ, ತಮ್ಮ ಆಸ್ತಿಗಳ ಮೇಲೆ ನಡೆದ ದಾಳಿಯ ಬಗ್ಗೆ ಕಾರ್ತಿ ಚಿದಂಬರಂ ಅವರು ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ʻʻಎಷ್ಟು ಬಾರಿ ದಾಳಿ ಮಾಡಿದರು ಎಂದು ನನಗೇ ಲೆಕ್ಕ ತಪ್ಪಿದೆ. ಬಹುಶಃ ಇದು ದಾಖಲೆಯಾಗಿರಬೇಕುʼʼ ಎಂದು ಬರೆದುಕೊಂಡಿದ್ದಾರೆ.
ಏನಿದು ಪ್ರಕರಣ?
ಯಾವುದೇ ದೇಶದ ನಾಗರಿಕರನ್ನು ದೇಶದೊಳಗೆ ಬಿಟ್ಟುಕೊಳ್ಳುವುದಕ್ಕೆ ಸಾಕಷ್ಟು ರೀತಿ ನಿಯಮಗಳು ಇರುತ್ತವೆ. ಪಾಸ್ ಪೋರ್ಟ್, ವೀಸಾ ವ್ಯವಸ್ಥೆಗಳೊಂದಿಗೆ ಬರಬೇಕು. ದೇಶದೊಳಗೆ ಬಂದ ವ್ಯಕ್ತಿ ಎಷ್ಟು ಸಮಯ ಇಲ್ಲಿರಬಹುದು ಎನ್ನುವುದಕ್ಕೂ ಮಿತಿಗಳಿವೆ. ಆದರೆ, ಈ ನಿಯಮಗಳಲ್ಲಿ ಸಡಿಲಿಕೆ ಮಾಡಿ ಕಾರ್ತಿ ಚಿದಂಬರಂ ಅವರು 250 ಚೀನಾ ಪ್ರಜೆಗಳನ್ನು ದೇಶದೊಳಗೆ ಬರಲು ಅವಕಾಶ ಮಾಡಿಕೊಟ್ಟಿದ್ದರು ಎನ್ನುವುದು ಆರೋಪ. ಒಬ್ಬ ಏಜೆಂಟ್ ಮೂಲಕ ಈ ವ್ಯವಹಾರ ನಡೆದಿದ್ದು, ಇದಕ್ಕಾಗಿ ಕಾರ್ತಿ ಪಡೆದಿರುವ ಲಂಚದ ಮೊತ್ತ 50 ಲಕ್ಷ ರೂ. ಎನ್ನಲಾಗುತ್ತಿದೆ.
ಇನ್ನೂ ಹಲವರ ಮೇಲೆ ದಾಳಿ?
ಇದೇ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಹಲವರ ಮೇಲೆ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ಮಂಡಳಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಕೂಡಾ ಈ ಹಿಂದೆ ಬಂಧಿಸಿತ್ತು. ಕೆಲವು ದಿನಗಳ ಕಾಲ ಅವರಿಗೆ ಜಾಮೀನು ಸಿಕ್ಕಿತ್ತು.
ಬಿರ್‌ಭೂಮ್ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶ