ನವ ದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಂಗಳೂರು ಸೇರಿದಂತೆ ದೇಶದ 31 ಕಡೆ ದಾಳಿ ನಡೆಸಿದ್ದ ಸಿಬಿಐ ದೆಹಲಿಯ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾರ ಮನೆಯಲ್ಲಿ ಸುಮಾರು ೧೪ ಗಂಟೆಗಳ ಕಾಲ ತನಿಖೆ ನಡೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮುಖ್ಯ ಕಡತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ಈ ದಾಳಿಯ ಅಂತ್ಯಗೊಂಡ ನಂತರ ಪ್ರತಿಕ್ರಿಯಿಸಿರುವ ಸಿಸೋಡಿಯಾ, ನಾನು ಯಾವುದೇ ತಪ್ಪು ಮಾಡಿಲ್ಲ. ಜನರಿಗಾಗಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವೆ ಎಂದಿದ್ದಾರೆ. ತಮ್ಮ ಮನೆಯಿಂದ ಸಿಬಿಐ ಅಧಿಕಾರಿಗಳು ಕೆಲ ಕಡತ, ಕಂಪ್ಯೂಟರ್ ಮತ್ತು ತಮ್ಮ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಅಬಕಾರಿ ನೀತಿ 2021-22 ಜಾರಿಗಾಗಿ ಅಬಕಾರಿ ವ್ಯಾಪಾರಿಯೊಬ್ಬರಿಂದ ಒಂದು ಕೋಟಿ ರೂ.ಗಳನ್ನು ಸಿಸೋಡಿಯಾರಿಗೆ ಸಂಬಂಧಿಸಿದ ಕಂಪನಿಯೊಂದಕ್ಕೆ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 17ರಂದು ಪ್ರಕರಣ ದಾಖಲಾಗಿತ್ತು. ಒಟ್ಟು 15 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಸಿಸೋಡಿಯಾರನ್ನು ಮೊದಲ ಆರೋಪಿ ಎಂದು ಹೆಸರಿಸಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ಇಂದು ಸಿಸೋಡಿಯಾ ಅವರ ಮನೆಯ ಮೇಲೆ ದಾಳಿ ನಡೆಸಿ, ಸುಮಾರು ಎಂಟು ಗಂಟೆಗಳ ಕಾಲ ತನಿಖೆ ನಡೆಸಿದೆ. ದೆಹಲಿಯ ಅಬಕಾರಿ ಸಚಿವರೂ ಆಗಿರುವ ಸಿಸೋಡಿಯಾ ಮಾತ್ರವಲ್ಲದೆ, ಅಬಕಾರಿ ಆಯುಕ್ತ ಆರ್ವ ಗೋಪಿ ಕೃಷ್ಣ ಸೇರಿದಂತೆ ಮೂವರು ಹಿರಿಯ ಅಧಿಕಾರಿಗಳ ಹಾಗೂ ಒಂಬತ್ತು ಮಂದಿ ಬಿಸ್ನೆನಸ್‌ಮೆನ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಈ ಸಿಬಿಐ ದಾಳಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀವ್ರವಾಗಿ ಖಂಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಮತ್ತು ಆರ್‌ಜೆಡಿಯ ನಾಯಕರೂ ಖಂಡಿಸಿದ್ದು, ಇದು ಪ್ರತಿಪಕ್ಷಗಳನ್ನು ಬೆದರಿಸುವ ತಂತ್ರ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ಸಂದರ್ಭದಲ್ಲಿ ಆಪ್‌ನ ಶಾಸಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ| ನ್ಯೂಯಾರ್ಕ್ ಟೈಮ್ಸ್ಲ್ಲಿ ವರದಿ ಬಂದಿದ್ದಕ್ಕೇ ಸಿಬಿಐ ದಾಳಿ ಆಗಿದೆ ಎಂದ ಆಪ್; ಪೇಡ್ ಎಂದು ಟೀಕಿಸಿದ ಬಿಜೆಪಿ