ನವದೆಹಲಿ: ಪುಲ್ವಾಮಾ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ (Satya Pal Malik) ಅವರ ಇತ್ತೀಚಿನ ಹೇಳಿಕೆ ಭಾರೀ ಸುದ್ದಿಗೆ ಕಾರಣವಾಗಿತ್ತು. ಈಗ, ರಿಲಯನ್ಸ್ ಜನರಲ್ ಇನ್ಶೂರೆನ್ಸ್ (Reliance General Insurance) ಹಗರಣಕ್ಕೆ ಸಂಬಂಧಿಸಿದಂತೆ ಈಗ ವಿಚಾರಣೆಗೆ ಹಾಜರಾಗಲು ಸತ್ಯಪಾಲ್ ಮಲಿಕ್ ಅವರಿಗೆ ಸಿಬಿಐ(CBI) ಸಮನ್ಸ್ ನೀಡಿದೆ. ಏಪ್ರಿಲ್ 28ರಂದು ಮಲಿಕ್ ಅವರನ್ನು ಕೇಂದ್ರ ತನಿಖಾ ದಳವು ವಿಚಾರಣೆಗೊಳಪಡಿಸಲಿದೆ.
ಕೆಲವು ನಿರ್ದಿಷ್ಟ ಸ್ಪಷ್ಟಣೆಗಳಿಗಾಗಿ ದಿಲ್ಲಿಯ ಅಕ್ಬರ್ ರೋಡ್ ಅತಿಥಿ ಗೃಹಕ್ಕೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿದೆ ಎಂದು ಸತ್ಯಪಾಲ್ ಮಲಿಕ್ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಅವರು ಕೆಲವು ಸ್ಪಷ್ಟೀಕರಣಗಳನ್ನು ಬಯಸಿದ್ದು, ನನಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ನಾನು ರಾಜಸ್ಥಾನಕ್ಕೆ ಹೋಗುತ್ತಿದ್ದೇನೆ ಹಾಗಾಗಿ ನಾನು ಲಭ್ಯವಿದ್ದಾಗ ಅವರಿಗೆ ಏಪ್ರಿಲ್ 27 ರಿಂದ 29 ರವರೆಗೆ ದಿನಾಂಕಗಳನ್ನು ನೀಡಿದ್ದೇನೆ ಎಂದು ಮಲಿಕ್ ಅವರು ಹೇಳಿದ್ದಾರೆ. ಸತ್ಯಪಾಲ್ ಮಲಿಕ್ ಅವರು 2018ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ಅನಿಲ್ ಅಂಬಾನಿ ನೇತೃತ್ವದ ವಿಮಾ ಕಂಪನಿಯ ಒಪ್ಪಂದವನ್ನು ರದ್ದು ಮಾಡಿದ್ದರು.
ಈ ಸಂಬಂಧ ದಾಖಲಾಗಿರುವ ಎಫ್ಐಆರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ವೈದ್ಯಕೀಯ ವಿಮಾ ಯೋಜನೆಯನ್ನು ಜಾರಿಗೊಳಿಸುವಲ್ಲಿ ಆಪಾದಿತ ಹಗರಣದಲ್ಲಿ ರಿಲಯನ್ಸ್ ಜನರಲ್ ಇನ್ಶುರೆನ್ಸ್ ಜೊತೆಗೆ ಟ್ರಿನಿಟಿ ರಿಇನ್ಶೂರೆನ್ಸ್ ಬ್ರೋಕರ್ ಕಂಪನಿಯನ್ನು ಸಿಬಿಐ ಆರೋಪಿಗಳೆಂದು ಹೆಸರಿಸಿದೆ. ಈ ಇನ್ಶೂರೆನ್ಸ್ ಸ್ಕೀಮ್‌ನಲ್ಲಿ ಹಗರಣ ನಡೆದಿದೆ ಎಂದು ಮಲಿಕ್ ಅವರು ಆರೋಪಿಸಿದ್ದರು. ಬಳಿಕ ಸಿಬಿಐ ತನಿಖೆಯನ್ನು ಕೈಗೆತ್ತಿಕೊಂಡಿತ್ತು.
ಇದನ್ನೂ ಓದಿ: Satya Pal Malik: ಪುಲ್ವಾಮ ದಾಳಿಗೆ ಮೋದಿ ನಿರ್ಲಕ್ಷ್ಯ ಕಾರಣ; ಸತ್ಯಪಾಲ್ ಮಲಿಕ್ ಗಂಭೀರ ಆರೋಪ
ಜಮ್ಮು ಕಾಶ್ಮೀರದ ಸುಮಾರು 3.5 ಲಕ್ಷ ಸರ್ಕಾರಿ ಉದ್ಯೋಗಿಗಳಿಗಾಗಿ 2018ರ ಸೆಪ್ಟೆಂಬರ್‌ನಲ್ಲಿ ಈ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಸ್ಕೀಮ್ ಲಾಗೂ ಆದ ತಿಂಗಳಲ್ಲಿ ಆಗಿನ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಅವರು ರದ್ದು ಮಾಡಿದ್ದರು. ಬಳಿಕ, ತನಿಖೆ ಆರಂಭವಾಗಿತ್ತು.