Site icon Vistara News

Operation Meghchakra | ಮಕ್ಕಳ ಅಶ್ಲೀಲ ವಿಡಿಯೊ ಹಂಚಿಕೆ ಜಾಲ ಭೇದಿಸಿದ ಸಿಬಿಐ, 20 ರಾಜ್ಯದಲ್ಲಿ ದಾಳಿ

Child

ನವದೆಹಲಿ: ಮಕ್ಕಳ ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳನ್ನು ಆನ್‌ಲೈನ್‌ ಮೂಲಕ ಹಂಚಿಕೆ ಮಾಡುವ ಬೃಹತ್‌ ಜಾಲವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಭೇದಿಸಿದೆ. ದೇಶದ ೧೯ ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ೫೬ ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ‘ಆಪರೇಷನ್‌ ಮೇಘಚಕ್ರ’ (Operation Meghchakra) ಹೆಸರಿನಲ್ಲಿ ಸಿಬಿಐ ಕಾರ್ಯಾಚರಣೆ ನಡೆಸಿದೆ.

ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಡಿಯೊಗಳು, ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದು, ವೈಯಕ್ತಿಕವಾಗಿ ಮೆಸೇಜ್‌ ಮಾಡಿ ಬ್ಲ್ಯಾಕ್‌ಮೇಲ್‌ ಮಾಡುವುದು ಸೇರಿ ಹಲವು ಕೃತ್ಯಗಳಲ್ಲಿ ತೊಡಗಿದ ಗ್ಯಾಂಗ್‌ಗಳ ಮೇಲೆ ದಾಳಿ ನಡೆದಿದೆ. ಸಿಂಗಾಪುರದಲ್ಲಿರುವ ಇಂಟರ್‌ಪೋಲ್‌ ಕಚೇರಿಯ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇನ್ನೂ ದಾಳಿ ಮುಂದುವರಿದಿದೆ ಎಂದು ತಿಳಿದುಬಂದಿದೆ.

“ಮಕ್ಕಳ ಅಶ್ಲೀಲ ವಿಡಿಯೊಗಳನ್ನು ಪ್ರಸರಣ ಮಾಡುವವರು ಕ್ಲೌಡ್‌ ಸ್ಟೋರೇಜ್‌ಅನ್ನು ಬಳಸುತ್ತಿದ್ದಾರೆ. ಹಾಗಾಗಿ, ನಾವು ಅವರ ಜಾಲಗಳನ್ನು ಭೇದಿಸಿ, ಪ್ರಕರಣದಲ್ಲಿ ಬಳಸಿರುವ ತಂತ್ರಜ್ಞಾನ ಸೇರಿ ವಿವಿಧ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ” ಎಂದು ಸಿಬಿಐ ಮೂಲಗಳು ತಿಳಿಸಿವೆ.

ಮಕ್ಕಳ ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳ ಪ್ರಕರಣಗಳನ್ನು ಭೇದಿಸಲು ರಚಿಸಿರುವ ಯಾಂತ್ರಿಕ ವ್ಯವಸ್ಥೆಯ ವರದಿ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಕಳೆದ ವರ್ಷ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆಯೇ ಕಳೆದ ವರ್ಷ “ಆಪರೇಷನ್‌ ಕಾರ್ಬನ್”‌ ಹೆಸರಿನಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ | ಟ್ವಿಟರ್​​ನಲ್ಲಿ 20 ರೂ.ಗೆ ಮಾರಾಟಕ್ಕಿವೆ ಮಕ್ಕಳ ಅಶ್ಲೀಲ ವಿಡಿಯೊಗಳು; ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಆರೋಪ

Exit mobile version