ನವದೆಹಲಿ: “ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿದೆ. ಬೇಸಿಗೆ ರಜೆ ಮುಗಿಯುವ ಮೊದಲೇ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಸ್ಪರ್ಧೆ, ಅಂಕ ಗಳಿಕೆಯ ಉದ್ದೇಶದಿಂದಾಗಿ ಅವಧಿಗೂ ಮೊದಲೇ ಶಾಲೆಗಳಲ್ಲಿ ತರಗತಿಗಳನ್ನು ಆರಂಭಿಸಲಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳಿಗಂತೂ ರಜೆಯೇ ಮರೀಚಿಕಯಾಗಿದೆ. ಇಂತಹ ಪರಿಸ್ಥಿತಿಯ ಮಧ್ಯೆಯೇ ಸಿಬಿಎಸ್‌ಇ ಶಾಲೆಗಳಿಗೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE)ಯು (CBSE Warning) ಮಹತ್ವದ ಎಚ್ಚರಿಕೆ ನೀಡಿದೆ. “ಯಾವುದೇ ಕಾರಣಕ್ಕೂ ಏಪ್ರಿಲ್ 1ಕ್ಕೂ ಮೊದಲು ಶೈಕ್ಷಣಿಕ ವರ್ಷವನ್ನು ಆರಂಭಿಸಬಾರದು. ತರಗತಿಗಳನ್ನು ಆರಂಭಿಸಬಾರದು” ಎಂದು ಶಾಲೆಗಳಿಗೆ ಸಿಬಿಎಸ್‌ಇ ಸೂಚಿಸಿದೆ.
“ಈಗಾಗಲೇ ಕೆಲವು ಶಾಲೆಗಳು 2023-24ನೇ ಶೈಕ್ಷಣಿಕ ವರ್ಷವನ್ನು ಆರಂಭಿಸಿವೆ ಎಂದು ತಿಳಿದುಬಂದಿದೆ. ಅದರಲ್ಲೂ, 10 ಹಾಗೂ 12ನೇ ತರಗತಿಗಳ ಪಠ್ಯದ ಬೋಧನೆ ಆರಂಭವಾಗದೆ ಎಂಬ ಮಾಹಿತಿ ಇದೆ. ಶೈಕ್ಷಣಿಕ ವರ್ಷಕ್ಕೂ ಮೊದಲೇ ಶಾಲೆಗಳನ್ನು ಆರಂಭಿಸುವುದರಿಂದ ಮಕ್ಕಳಲ್ಲಿ ಸುಸ್ತು ಹಾಗೂ ಹೆಚ್ಚಿನ ಒತ್ತಡ ಬೀಳುತ್ತದೆ. ಹಾಗಾಗಿ, ಯಾವುದೇ ಕಾರಣಕ್ಕೂ ಸಿಬಿಎಸ್‌ಇ ತರಗತಿಗಳನ್ನು ಏಪ್ರಿಲ್ 1ಕ್ಕೂ ಮೊದಲು ಆರಂಭಿಸಬಾರದು” ಎಂದು ಸೂಚನೆ ನೀಡಿದೆ.
“ಒಂದು ಶೈಕ್ಷಣಿಕ ವರ್ಷಕ್ಕಿಂತ ಮೊದಲೇ ಪಠ್ಯವನ್ನು ಮುಗಿಸುವುದು. ಮಕ್ಕಳು ನಿಯಮಿತವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಅದಕ್ಕಾಗಿಯೇ ಶೈಕ್ಷಣಿಕ ವರ್ಷ ಹಾಗೂ ಪಠ್ಯವನ್ನು ಸಿದ್ಧಪಡಿಸಲಾಗಿರುತ್ತದೆ. ಮಕ್ಕಳ ಓದು ಹಾಗೂ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಅವರ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ. ಹಾಗಾಗಿ, ಶೈಕ್ಷಣಿಕ ವರ್ಷದ ಆರಂಭದ ಅವಧಿಗಿಂತ ಮೊದಲು ತರಗತಿಗಳನ್ನು ಆರಂಭಿಸಕೂಡದು” ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಹೇಳಿದರು.
ಶಿಕ್ಷಣ ಎಂದರೆ ಬರೀ ಓದುವುದಲ್ಲ
“ಮಕ್ಕಳಿಗೆ ಶೈಕ್ಷಣಿಕ ವರ್ಷವೆಂದರೆ, ಶಿಕ್ಷಣ ಎಂದರೆ ಬರೀ ಓದುವುದು, ತರಗತಿಗಳಿಗೆ ಹಾಜರಾಗುವುದು ಅಲ್ಲ. ಅವರು ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಜೀವನ ಕೌಶಲಗಳನ್ನು ಅಳವಡಿಸಿಕೊಳ್ಳುವುದು, ಮೌಲ್ಯಗಳನ್ನು ವೃದ್ಧಿಸಿಕೊಳ್ಳುವುದು, ಆರೋಗ್ಯ ಹಾಗೂ ದೈಹಿಕ ಶಿಕ್ಷಣವೂ ಅವರಿಗೆ ಮುಖ್ಯವಾಗುತ್ತದೆ. ಅವಧಿಗೂ ಮುನ್ನವೇ ತರಗತಿಗಳನ್ನು ಆರಂಭ ಮಾಡಿದರೆ ಇವುಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಆದೇಶದಲ್ಲಿ ವಿವರಿಸಿದ್ದಾರೆ.
ಸಿಬಿಎಸ್‌ಇ ವಾರ್ಷಿಕ ಪರೀಕ್ಷೆ
ಸದ್ಯ, ಸಿಬಿಎಸ್‌ಇ 10 ಹಾಗೂ 12ನೇ ತರಗತಿಯ ವಾರ್ಷಿಕ ಪರೀಕ್ಷೆ ನಡೆಯುತ್ತಿವೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಫೆಬ್ರವರಿ 15ರಂದು ಪರೀಕ್ಷೆ ಆರಂಭವಾಗಿದ್ದು, 10ನೇ ತರಗತಿಯವರ ಪರೀಕ್ಷೆ ಮಾರ್ಚ್ 21ರಂದು ಹಾಗೂ 12ನೇ ತರಗತಿಯ ಪರೀಕ್ಷೆ ಏಪ್ರಿಲ್ 5ರಂದು ಮುಗಿಯಲಿವೆ. ಇದರ ಮಧ್ಯೆಯೇ ತರಗತಿಗಳನ್ನು ಆರಂಭಿಸಿರುವುದು ಸಿಬಿಎಸ್‌ಇ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Suresh Kumar: ಮಕ್ಕಳ ಎಕ್ಸಾಂ ಇದೆ, ಸ್ವಲ್ಪ ಸೌಂಡ್‌ಗೆ ಬ್ರೇಕ್ ಹಾಕಿ; ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದು ಯಾರಿಗೆ?