Site icon Vistara News

NET 2024: ಪರೀಕ್ಷೆ ನಡೆದ ಒಂದೇ ದಿನದಲ್ಲಿ ನೆಟ್ ರದ್ದುಗೊಳಿಸಿದ ಕೇಂದ್ರ ಸರ್ಕಾರ; ಏನಿದು ಕೇಸ್?‌

NET 2024

Center Decides To Cancel NET Examination 2024 Conducted On June 18 Amid Controversy

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET 2024) ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಜೂನ್‌ 18ರಂದು ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನೇ (NET 2024) ಕೇಂದ್ರ ಸರ್ಕಾರವು ರದ್ದುಗೊಳಿಸಿದೆ. ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ-ನೆಟ್‌ 2024 ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ರದ್ದುಗೊಳಿಸಿದೆ. ನ್ಯಾಷನ್‌ ಸೈಬರ್‌ ಕ್ರೈಮ್‌ ಥ್ರೆಟ್‌ ಅನಾಲಿಟಿಕ್ಸ್‌ ಯುನಿಟ್‌ ಆಫ್‌ ಇಂಡಿಯನ್‌ ಸೈಬರ್‌ ಕ್ರೈಮ್‌ ಕೋ-ಆರ್ಡಿನೇಷನ್‌ ಸೆಂಟರ್‌ನಿಂದ ಯುಜಿಸಿಗೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.

ಜೂನ್‌ 18ರಂದು ಕರ್ನಾಟಕ ಸೇರಿ ದೇಶಾದ್ಯಂತ 317 ನಗರಗಳ 1,205 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 11 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೆಟ್‌ಗೆ ಹಾಜರಾಗಿದ್ದರು. ಈಗ ಪರೀಕ್ಷೆಯನ್ನು ರದ್ದುಗೊಳಿಸಿರುವ ಕಾರಣ ಶೀಘ್ರದಲ್ಲೇ ಹೊಸ ದಿನಾಂಕ ಘೋಷಿಸಲಾಗುತ್ತದೆ ಎಂದು ತಿಳಿದುಬಂದಿದೆ. ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಿಎಚ್‌.ಡಿ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಬದಲು ಅಭ್ಯರ್ಥಿಯು ನೆಟ್‌ನಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲು ಯುಜಿಸಿಯು ಈಗಾಗಲೇ ಅನುಮೋದನೆ ನೀಡಿದೆ. ಹಾಗಾಗಿ, ಅಭ್ಯರ್ಥಿಗಳಿಗೆ ನೆಟ್‌ ಪ್ರಮುಖ ಸಂಗತಿಯಾಗಿದೆ.

2024-25ನೇ ಶೈಕ್ಷಣಿಕ ಸಾಲಿನಿಂದಲೇ ಪಿಎಚ್‌.ಡಿ ಪ್ರವೇಶಾತಿ ವೇಳೆ ಸಿಇಟಿ ಬದಲಾಗಿ ನೆಟ್‌ ಅಂಕಗಳನ್ನೇ ಪರಿಗಣಿಸಬೇಕು ಎಂಬುದಾಗಿ ಯುಜಿಸಿಯು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ (NEP) ಅಡಿಯಲ್ಲಿಯೇ ಯುಜಿಸಿಯು ಈ ತೀರ್ಮಾನ ತೆಗೆದುಕೊಂಡಿದೆ. ಕಳೆದ ಮಾರ್ಚ್‌ 13ರಂದು ನಡೆದ ಸಭೆಯಲ್ಲಿ ಯುಜಿಸಿ ನೆಟ್‌ ಪರೀಕ್ಷೆಯ ನಿಬಂಧನೆಗಳ ಮರುಪರಿಶೀಲನೆ ಕುರಿತು ರಚಿಸಿದ ತಜ್ಞರ ಸಮಿತಿಯ ಶಿಫಾರಸುಗಳ ಅನ್ವಯ ಯುಜಿಸಿ ತೀರ್ಮಾನ ತೆಗೆದುಕೊಂಡಿದೆ. ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಲಾಗಿದೆ.

ಇದನ್ನೂ ಓದಿ: NEET UG 2024: ನೀಟ್ ಯುಜಿ ವಿವಾದ; ಶೇ. 0.001ರಷ್ಟು ನಿರ್ಲಕ್ಷ್ಯವೂ ಸಹಿಸಲು ಸಾಧ್ಯವಿಲ್ಲ ಎಂದು ಚಾಟಿ ಬೀಸಿದ ಸುಪ್ರೀಂ ಕೋರ್ಟ್‌

Exit mobile version