ನವದೆಹಲಿ: ರಾಹುಲ್ ಗಾಂಧಿ ಅವರಿಂದ ಕ್ಷಮಾಯಾಚನೆಗೆ ಒತ್ತಡ ಹಾಕುತ್ತಿರುವ ಬಿಜೆಪಿಯ ವಿರುದ್ಧ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರು ಗುಡುಗಿದ್ದಾರೆ. ಸಂಸತ್ ನಡೆಯುವುದು ಸರ್ಕಾರಕ್ಕೆ ಇಷ್ಟವಿಲ್ಲ. ಎಂದಾದರೂ ಆಡಳಿತ ಪಕ್ಷದವರ ಸಂಸತ್ತಿನಲ್ಲಿ ಕಲಾಪ ನಡೆಯದಂತೆ ಗದ್ದಲ ಮಾಡಿದ್ದಾರಾ ಎಂದು ಪ್ರಶ್ನಿಸಿರುವ ಅವರು, ಬಿಜೆಪಿಗೆ ಸಂಸತ್ ನಡೆಯುವುದು ಬೇಕಾಗಿಲ್ಲ ಎಂದು ದೂರಿದರು. ರಾಹುಲ್ ಗಾಂಧಿ ಅವರು ಕ್ಷಮೆ ಕೇಳುವುದಲ್ಲ, ಬದಲಿಗೆ ಕೇಂದ್ರ ಸರ್ಕಾರವೇ ರಾಹುಲ್ ಗಾಂಧಿ ಅವರ ಕ್ಷಮೆ ಕೇಳಬೇಕು ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ, ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಬುಧವಾರ 11 ಗಂಟೆಗೆ ಮುಂದೂಡಲಾಗಿದೆ(Budget session 2023).
ಬಜೆಟ್ ಅಧಿವೇಶನದ ಎರಡನೇ ಭಾಗ ಸೋಮವಾರದಿಂದ ಆರಂಭವಾಗಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಗಲಾಟೆಗಳಿಂದಾಗಿ ಈ ವರೆಗೂ ಕಲಾಪ ನಡೆಸಲು ಸಾಧ್ಯವಾಗಿಲ್ಲ. ಲಂಡನ್‌ನಲ್ಲಿ ರಾಹುಲ್ ಗಾಂಧಿ ಅವರು ಭಾರತವನ್ನು ಅವಮಾನಿಸಿದ್ದಾರೆ. ಹಾಗಾಗಿ, ಅವರು ಕ್ಷಮೆ ಕೋರಬೇಕೆಂದು ಬಿಜೆಪಿ ಗದ್ದಲ ಮಾಡಿದರೆ, ಅದಾನಿ ಷೇರು ವ್ಯವಹಾರ ಕುರಿತು ಜೆಪಿಸಿ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಗಲಾಟೆ ಮಾಡಿದೆ. ಹಾಗಾಗಿ, ಸೋಮವಾರ ಉಭಯ ಸದನಗಳಲ್ಲಿ ಕಲಾಪ ನಡೆಸಲು ಸಾಧ್ಯವಾಗಿಲ್ಲ.
ಈ ಮಧ್ಯೆ, ಸಭಾ ನಾಯಕರೂ ಆಗಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಹುಲ್ ಗಾಂಧಿ ಅವರು ಸಂಸತ್‌ಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಇತ್ತೀಚೆಗೆ, ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯು ರಾಹುಲ್ ಗಾಂಧಿ ಅವರಿಂದ ಕ್ಷಮೆಗೆ ಆಗ್ರಹಿಸುತ್ತಿದೆ.