ನವದೆಹಲಿ: ದೇಶದಲ್ಲಿ ವಸಾಹತು ಕಾಲದ ಕ್ರಿಮಿನಲ್ ಕಾನೂನುಗಳ (Criminal Laws) ಸಂಪೂರ್ಣ ತಿದ್ದುಪಡಿ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೊಳಿಸಿ, ಹೊಸ ಹೆಸರುಗಳೊಂದಿಗೆ ಕಾಯ್ದೆಯಾಗಿ ಜಾರಿಗೆ ತರುವ ದಿಸೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ವಿಧೇಯಕಗಳನ್ನು ಸಂಸತ್‌ನಲ್ಲಿ ಮಂಡಿಸಿದರು.
ಮೂರು ವಿಧೇಯಕಗಳ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಅಮಿತ್ ಶಾ, “ಬ್ರಿಟಿಷ್ ಕಾಲದ ಕಾನೂನುಗಳನ್ನು ರದ್ದುಗೊಳಿಸಲಾಗುತ್ತದೆ. ಬ್ರಿಟಿಷರು ತಮ್ಮ ಆಡಳಿತವನ್ನು ಬಲಿಷ್ಠಗೊಳಿಸಲು ಕಾನೂನು ಜಾರಿಗೆ ತಂದಿದ್ದರು. ಅವರು ತಂದ ಕಾನೂನು ನ್ಯಾಯ ಕೊಡಿಸುವುದಕ್ಕಿಂತ, ಶಿಕ್ಷೆಯನ್ನೇ ಹೆಚ್ಚು ಕೊಡಿಸುತ್ತಿದ್ದವು. ಆದರೆ, ದೇಶದ ಜನರಿಗೆ ನ್ಯಾಯ ಒದಗಿಸುವುದು ಹಾಗೂ ದೇಶದ ಜನರಿಗೆ ಹಕ್ಕುಗಳನ್ನು ನೀಡುವ ದಿಸೆಯಲ್ಲಿ ನೂತನ ಕ್ರಿಮಿನಲ್ ಕಾನೂನುಗಳನ್ನು ರೂಪಿಸಲಾಗುತ್ತಿದೆ” ಎಂದು ತಿಳಿಸಿದರು.
ನೂತನ ಕಾನೂನುಗಳು
ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗುತ್ತಿದ್ದು, ಇವುಗಳನ್ನು ಸಂಸದೀಯ ಸಮಿತಿಯ ಪರಿಶೀಲನೆಗಾಗಿ ಕಳುಹಿಸಲಾಗುತ್ತಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದರು.
ಭಾರತೀಯ ನ್ಯಾಯ ಸಂಹಿತೆ ಓದಿ
ಪ್ರಮುಖ ಬದಲಾವಣೆಗಳು ಯಾವವು?
1. ದೇಶದ್ರೋಹ ಕಾನೂನು ಬದಲು
ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದ ದೇಶದ್ರೋಹದ ಕಾನೂನು ನೂತನ ಕ್ರಿಮಿನಲ್ ಕಾನೂನಿನಲ್ಲಿ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದರು. ದೇಶದ್ರೋಹ ಕಾನೂನಿನಲ್ಲಿ ಬಂಧಿತರಾದವರಿಗೆ ಮೂರು ವರ್ಷದಿಂದ ಜೀವಾವಧಿ ಶಿಕ್ಷೆ ನೀಡಬಹುದಾಗಿದ್ದು, ಈ ಕಾನೂನು ರದ್ದುಗೊಳಿಸಲಾಗುತ್ತದೆ ಎಂದು ಹೇಳಿದರು. ಇದರ ಬದಲಾಗಿ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಕೂಡ ತಿಳಿಸಿದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಓದಿ
2. ಅತ್ಯಾಚಾರಿಗಳಿಗೆ 20 ವರ್ಷ ಜೈಲು
ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ನೂತನ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. “ಹೊಸ ಕಾನೂನುಗಳ ಅಡಿಯಲ್ಲಿ ಅತ್ಯಾಚಾರಿಗಳಿಗೆ ಗರಿಷ್ಠ 20 ವರ್ಷ ಅಥವಾ ಅವರು ಜೀವಿತಾವಧಿವರೆಗೆ ಜೈಲಿನಲ್ಲಿ ಕಾಲ ಕಳೆಯುವ ರೀತಿ ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವ, ಅತ್ಯಾಚಾರ ಸಂತ್ರಸ್ತೆಯರ ಮಾಹಿತಿ ಬಹಿರಂಗಪಡಿಸಿದವರಿಗೂ ಶಿಕ್ಷೆ ವಿಧಿಸುವ ಕಾನೂನು ಇರಲಿದೆ” ಎಂದು ಅಮಿತ್ ಶಾ ಮಾಹಿತಿ ನೀಡಿದರು.
ಭಾರತೀಯ ಸಾಕ್ಷ್ಯ ವಿಧೇಯಕ ಓದಿ
ಇದನ್ನೂ ಓದಿ: ವಿಸ್ತಾರ Explainer: ವೈಯಕ್ತಿಕ ಡೇಟಾ ರಕ್ಷಣೆ ವಿಧೇಯಕಕ್ಕೆ ಲೋಕಸಭೆ ಅಸ್ತು; ಏನಿದು ಮಸೂದೆ? ಏನು ಉಪಯೋಗ?
3. ಗುಂಪು ಹತ್ಯೆ ಅಪರಾಧಿಗಳಿಗೆ ಜೀವಾವಧಿ
ದೇಶದಲ್ಲಿ ನರೇಂದ್ರ ಮೋದಿ ಆಡಳಿತದಲ್ಲಿ ಗುಂಪು ಹತ್ಯೆಗಳ (Mob Lynching) ಸಂಖ್ಯೆ ಜಾಸ್ತಿಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಗುಂಪು ಹತ್ಯೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಮುಂದಾಗಿದೆ. “ಗುಂಪು ಹತ್ಯೆಯಲ್ಲಿ ಭಾಗಿಯಾದವರಿಗೆ ಕನಿಷ್ಠ ಏಳು ವರ್ಷ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ, ಹೆಚ್ಚಿನ ಮೊತ್ತದ ದಂಡವನ್ನೂ ವಿಧಿಸಲಾಗುತ್ತದೆ” ಎಂದು ಅಮಿತ್ ಶಾ ತಿಳಿಸಿದರು.