ನವದೆಹಲಿ: ಕೇಂದ್ರ ಸರ್ಕಾರವು ರೈತರಿಗೆ ಖುಷಿಯ ಸುದ್ದಿ ನೀಡಿದೆ. ಹಿಂಗಾರು ಹಂಗಾಮಿಗಾಗಿ (Rabi Season) ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (Phosphatic & potassic) ರಸಗೊಬ್ಬರಗಳಿಗೆ 22, 303 ಕೋಟಿ ರೂಪಾಯಿ ಸಬ್ಸಿಡಿಗೆ (Fertilizer Subsidy) ಕೇಂದ್ರವು ಸರ್ಕಾರವು (Central Government) ಬುಧವಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಘೋಷಿಸಿದರು(Union minister Anurag Thakur). ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಕೃಷಿ ವಲಯವು ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ, ಈ ಸಂಕಟದಿಂದ ರೈತರನ್ನು ಪಾರು ಮಾಡಲು ಕೇಂದ್ರ ಸರ್ಕಾರವು ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು ಮುಂದುವರಿಸಲು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
2023ರ ಅಕ್ಟೋಬರ್ 1ರಿಂದ 2024ರ ಮಾರ್ಚ್ 31ರವರೆಗೆ ಹಿಂಗಾರು ಋತುವಿನ ಸಬ್ಸಿಡಿಯನ್ನು ಪ್ರಕಟಿಸಲಾಗಿದೆ. ಪ್ರತಿ ಕೆಜಿ ಸಾರಜನಕಕ್ಕೆ 47.2 ರೂಪಾಯಿ, ಪ್ರತಿ ಕೆಜಿ ರಂಜಕಕ್ಕೆ 20.82 ರೂ., ಪ್ರತಿ ಕೆಜಿ ಪೊಟ್ಯಾಷ್ ಸಬ್ಸಿಡಿ 2.38 ರೂಪಾಯಿ ಹಾಗೂ ಪ್ರತಿ ಕೆಜಿ ಸಲ್ಪರ್‌ಗೆ 1.89 ರೂ. ಸಬ್ಸಿಡಿ ದೊರೆಯಲಿದೆ. ಇದರಿಂದ ರೈತರಿಗೆ ಭಾರಿ ನೆರವು ದೊರೆಯಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಹೇಳಿದ್ದಾರೆ.
ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಸಬ್ಸಿಡಿಯನ್ನು ಮುಂದುವರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗಲೂ ಆ ಹೊರೆಯನ್ನು ರೈತರ ಮೇಲೆ ಹೇರಲು ಬಿಡುವುದಿಲ್ಲ. ಹಾಗಾಗಿ, ಡಿಎಪಿ ಮೇಲಿನ ಸಬ್ಸಿಡಿ ಪ್ರತಿ ಟನ್‌ಗೆ 4500 ರೂ. ಮುಂದುವರಿಯಲಿದೆ. ಡಿಎಪಿ ಹಳೆ ದರದಂತೆ ಪ್ರತಿ ಚೀಲಕ್ಕೆ 1350 ರೂಪಾಯಿಗೆ ದೊರೆಯಲಿದೆ. ಎನ್‌ಪಿಕೆ ಪ್ರತಿ ಚೀಲಕ್ಕೆ 1470 ರೂ. ದರದಲ್ಲಿ ಲಭ್ಯವಿರುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ರೈತರ ಕಲ್ಯಾಣಕ್ಕಾಗಿ ರಸಗೊಬ್ಬರ ಸಹಾಯಧನ 1.08 ಲಕ್ಷ ಕೋಟಿ ರೂಪಾಯಿಗೆ ಏರಿಕೆ: ಸಂಸದ ಈರಣ್ಣ ಕಡಾಡಿ
ಪೊಟ್ಯಾಷಿಯಂ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 01.04.2010 ರಿಂದ ಎನ್‌ಬಿಎಸ್ ಯೋಜನೆಯಿಂದ ನಿಯಂತ್ರಿಸಲಾಗುತ್ತದೆ. ಅದರ ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಕೈಗೆಟುಕುವ ಬೆಲೆಯಲ್ಲಿ ರೈತರಿಗೆರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬದ್ಧವಾಗಿದೆ ಎಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಸಗೊಬ್ಬರ ಮತ್ತು ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ಗಳ ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳ ದೃಷ್ಟಿಯಿಂದ, 2023-24 ಹಿಂಗಾರು ಋತುವಿನ ಎನ್‌ಬಿಎಸ್ ದರಗಳನ್ನು ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್‌ನಲ್ಲಿ 01.10.23 ರಿಂದ 31.03.24 ರವರೆಗೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಅನುಮೋದಿತ ಮತ್ತು ಅಧಿಸೂಚಿತ ದರಗಳ ಪ್ರಕಾರ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿಯನ್ನು ಒದಗಿಸಲಾಗುವುದು ಇದರಿಂದ ರಸಗೊಬ್ಬರಗಳು ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರವು ತನ್ನು ಹೇಳಿಕೆಯಲ್ಲಿ ತಿಳಿಸಿದೆ.