Site icon Vistara News

ಕೇಂದ್ರ ಸರ್ಕಾರ ಮಾಸ್ಟರ್‌ಸ್ಟ್ರೋಕ್‌; 18 ಒಟಿಟಿ, 19 ವೆಬ್‌ಸೈಟ್‌, 10 ಆ್ಯಪ್‌ಗಳ ನಿಷೇಧ

Central Government Bans OTT Platforms

Central Government blocks 18 OTT platforms, 19 websites for obscene, vulgar, pornographic content

ನವದೆಹಲಿ: ಅಸಭ್ಯ, ಅಶ್ಲೀಲ ವಿಡಿಯೊಗಳು, ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳು (OTT Platforms), 19 ವೆಬ್‌ಸೈಟ್‌ಗಳನ್ನು (Websites), 10 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ (Central Government) ನಿಷೇಧಿಸಿದೆ. ಒಟಿಟಿ, ವೆಬ್‌ಸೈಟ್‌, ಆ್ಯಪ್‌ಗಳ ಜತೆಗೆ 57 ಸೋಷಿಯಲ್‌ ಮೀಡಿಯಾ ಖಾತೆಗಳನ್ನೂ ನಿಷೇಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶ ಹೊರಡಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ (2000) ಅಡಿಯಲ್ಲಿ ಕೇಂದ್ರ ಸರ್ಕಾರದ ಹಲವು ಸಚಿವಾಲಯಗಳು, ಇಲಾಖೆಗಳು, ಡೊಮೇನ್‌ ತಜ್ಞರು, ಮಾಧ್ಯಮ, ಮನರಂಜನೆ, ಮಹಿಳೆಯರ ಹಕ್ಕುಗಳು ಹಾಗೂ ಮಕ್ಕಳ ಹಕ್ಕುಗಳ ತಜ್ಞರನ್ನು ಸಂಪರ್ಕಿಸಿ ಒಟಿಟಿ ಪ್ಲಾಟ್‌ಫಾರ್ಮ್‌, ವೆಬ್‌ಸೈಟ್‌ಗಳು, ಸೋಷಿಯಲ್‌ ಮೀಡಿಯಾ ಖಾತೆಗಳನ್ನು, ಆ್ಯಪ್‌ಗಳನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಮಾಹಿತಿ ನೀಡಿದೆ.

ಒಟಿಟಿ, ವೆಬ್‌ಸೈಟ್‌, ಸೋಷಿಯಲ್‌ ಮೀಡಿಯಾ ಹಾಗೂ ಆ್ಯಪ್‌ಗಳ ಮೂಲಕ ಅಶ್ಲೀಲ, ಅಸಭ್ಯ ವಿಡಿಯೊ, ಮಹಿಳೆಯರನ್ನು ಅಶ್ಲೀಲವಾಗಿ ತೋರಿಸಿದ ಫೋಟೊ, ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಕ್ರಮ ತೆಗೆದುಕೊಂಡಿದೆ. “ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಸಂಬಂಧ ಇರುವುದು ಸೇರಿ ಹಲವು ರೀತಿಯ ಅಸಭ್ಯ, ಅಶ್ಲೀಲ ಅಂಶಗಳು ಇರುವ ಕಾರಣ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಬ್ಯಾನ್‌ ಆದ ಒಟಿಟಿ ಪ್ಲಾಟ್‌ಫಾರ್ಮ್‌ಗಳು

ಡ್ರೀಮ್ಸ್‌ ಫಿಲ್ಮ್ಸ್‌, ವೂವಿ ಯೆಸ್‌ಮಾ, ಅನ್‌ಕಟ್‌ ಅಡ್ಡಾ, ಟ್ರೈ ಫ್ಲಿಕ್ಸ್‌, ಎಕ್ಸ್‌ ಪ್ರೈಮ್‌, ನಿಯೋನ್‌ ಎಕ್ಸ್‌ ವಿಐಪಿ, ಬೇಶರಮ್ಸ್‌, ಹಂಟರ್ಸ್‌, ರ‍್ಯಾಬಿಟ್‌, ಎಕ್ಸ್‌ಟ್ರಾಮೂಡ್‌, ನ್ಯೂಫ್ಲಿಕ್ಸ್‌, ಮೂಡ್‌ಎಕ್ಸ್‌, ಮೋಜ್‌ಫ್ಲಿಕ್ಸ್‌, ಹಾಟ್‌ ಶಾಟ್ಸ್‌ ವಿಐಪಿ, ಫುಗಿ, ಚಿಕೂಫ್ಲಿಕ್ಸ್‌ ಹಾಗೂ ಪ್ರೈಮ್‌ ಪ್ಲೇ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಇದನ್ನೂ ಓದಿ: UAPA : ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ ಸಂಘಟನೆಗೆ 5 ವರ್ಷ ನಿಷೇಧ ಹೇರಿದ ಮೋದಿ ಸರ್ಕಾರ

ಒಟಿಟಿ ವೇದಿಕೆಗಳಂತೂ ಕೋಟ್ಯಂತರ ವೀಕ್ಷಕರನ್ನು ಹೊಂದಿವೆ. ಒಂದು ಒಟಿಟಿಯಂತೂ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಒಂದು ಕೋಟಿ ಡೌನ್‌ಲೋಡ್‌ಗಳನ್ನು ಕಂಡಿದೆ. ಇನ್ನೂ ಎರಡು ಒಟಿಟಿ ಪ್ಲಾಟ್‌ಫಾರ್ಮ್‌ಗಳು 50 ಲಕ್ಷಕ್ಕೂ ಅಧಿಕ ಡೌನ್‌ಲೋಡ್‌ಗಳನ್ನು ಕಂಡಿವೆ ಎಂದು ಸರ್ಕಾರ ತಿಳಿಸಿದೆ. ಸಾಮಾಜಿಕ ಜಾಲತಾಣಗಳ ಖಾತೆಗಳು ಕೂಡ 32 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version