ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ, ಸಚಿವ ಸಂಪುಟ ರಚಿಸಿ, ಖಾತೆಗಳ ಹಂಚಿಕೆಯನ್ನೂ ಮಾಡಿರುವ ನರೇಂದ್ರ ಮೋದಿ (Narendra Modi) ಅವರೀಗ 8 ಸಂಪುಟ ಸಮಿತಿಗಳನ್ನು (Cabinet Committees) ಕೂಡ ರಚಿಸಿದ್ದಾರೆ. ನೇಮಕಾತಿಗಳ ಸಂಪುಟ ಸಮಿತಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಭದ್ರತಾ ಸಂಪುಟ ಸಮಿತಿ ಸೇರಿ 8 ಸಮಿತಿಗಳನ್ನು ರಚಿಸಲಾಗಿದ್ದು, ಭದ್ರತಾ ಸಮಿತಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮುಖ್ಯಸ್ಥರಾಗಿದ್ದಾರೆ.
ನೇಮಕಾತಿಗಳ ಸಂಪುಟ ಸಭೆಗೆ ನರೇಂದ್ರ ಮೋದಿ ಮುಖ್ಯಸ್ಥರಾದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದಸ್ಯರಾಗಿದ್ದಾರೆ. ಇನ್ನು, ವಸತಿ, ಆರ್ಥಿಕ ವ್ಯವಹಾರಗಳು, ಸಂಸದೀಯ ವ್ಯವಹಾರಗಳು, ರಾಜಕೀಯ ವ್ಯವಹಾರಗಳು, ಭದ್ರತೆ, ಹೂಡಿಕೆ ಮತ್ತು ಬೆಳವಣಿಗೆ ಹಾಗೂ ಕೌಶಲ, ಉದ್ಯೋಗ ಹಾಗೂ ಜೀವನೋಪಾಯ ಸಂಪುಟ ಸಮಿತಿಗಳಿಗೂ ಮುಖ್ಯಸ್ಥರು, ಸದಸ್ಯರು ಹಾಗೂ ವಿಶೇಷ ಆಹ್ವಾನಿತರನ್ನು ನರೇಂದ್ರ ಮೋದಿ ಅವರು ನೇಮಿಸಿದ್ದಾರೆ. ಸಚಿವಾಲಯಗಳಿಗೆ ನೇಮಕ, ಪ್ರಮುಖ ತೀರ್ಮಾನ ಸೇರಿ ಹಲವು ನಿರ್ಧಾರಗಳನ್ನು ಸಂಪುಟ ಸಮಿತಿಗಳು ತೆಗೆದುಕೊಳ್ಳಲಿವೆ.
Central Government cabinet committees formed. pic.twitter.com/A3u7lz9gdm
— ANI (@ANI) July 3, 2024
ಸಂಪುಟ ಸಮಿತಿಗಳು ಏಕೆ ಪ್ರಮುಖ?
ದೇಶದ ಹಣಕಾಸು, ನೇಮಕಾತಿ, ಭದ್ರತೆ ಸೇರಿ ಹಲವು ವಿಷಯಗಳ ಕುರಿತು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ ದಿಸೆಯಲ್ಲಿ, ಪ್ರಮುಖ ಸಚಿವಾಲಯಗಳ ದಕ್ಷತೆ, ನಿರ್ವಹಣೆ ಮಾಡುವ ದಿಸೆಯಲ್ಲಿ ಸಂಪುಟ ಸಮಿತಿಗಳನ್ನು ರಚಿಸಲಾಗುತ್ತದೆ. ಸಾಮಾನ್ಯವಾಗಿ ಮೂರರಿಂದ ಎಂಟು ಸಂಪುಟ ಸಮಿತಿಗಳನ್ನು ರಚಿಸಲಾಗುತ್ತದೆ. ಯಾವುದೇ ನೂತನ ಸರ್ಕಾರ ರಚನೆಯಾದ ಬಳಿಕ ಪ್ರಧಾನಮಂತ್ರಿಯೇ ಸಮಿತಿಗಳನ್ನು ರಚಿಸುತ್ತಾರೆ. ಸಮಿತಿಗಳಿಗೆ ಸದಸ್ಯರು ಅಥವಾ ಮುಖ್ಯಸ್ಥರನ್ನು ಕೂಡ ಪ್ರಧಾನಿ ಆಯ್ಕೆಯಾಗಿರುತ್ತದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 12 ಸಮಿತಿಗಳನ್ನು ರಚಿಸಿದ್ದರು.
ಪ್ರಧಾನಮಂತ್ರಿ, ಸಚಿವರು ಪ್ರಮುಖ ಸಂಪುಟ ಸಮಿತಿಗಳ ಸದಸ್ಯರು ಅಥವಾ ಮುಖ್ಯಸ್ಥರಾಗಿರುತ್ತಾರೆ. ಹಾಗೆಯೇ, ಪ್ರಧಾನಿಯವರು ವಿಶೇಷ ಆಹ್ವಾನಿತರನ್ನು ಕೂಡ ಸಮಿತಿಗಳ ಸದಸ್ಯರನ್ನಾಗಿ ನೇಮಿಸಬಹುದಾಗಿದೆ. ಇಷ್ಟೆಲ್ಲ ಕಾರಣಗಳಿಂದಾಗಿ ಸಂಪುಟ ಸಮಿತಿಗಳ ರಚನೆಯು ಪ್ರಮುಖ ಸಂಗತಿಯಾಗಿದೆ.
ಇದನ್ನೂ ಓದಿ: NEET UG : ನೀಟ್ ಪರೀಕ್ಷೆ ಅಕ್ರಮಗಳ ತನಿಖೆ ಹೊಣೆ ಸಿಬಿಐಗೆ ಒಪ್ಪಿಸಿದ ಕೇಂದ್ರ ಸರ್ಕಾರ