ನವದೆಹಲಿ: ಕೇಂದ್ರ ಸರ್ಕಾರವು ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಪರ್ಸನಲ್ ಕಂಪ್ಯೂಟರ್‌ಗಳ ಆಮದು ನಿರ್ಬಂಧಿಸಿದ ಬೆನ್ನಲ್ಲೇ ಕೆಲ ನಿರ್ಬಂಧಗಳನ್ನು ಸಡಿಲಿಸಿದೆ. ಲ್ಯಾಪ್‌ಟಾಪ್ (Laptop Import) ಸೇರಿ ಹಲವು ಗ್ಯಾಜೆಟ್‌ಗಳನ್ನು ಆಮದು ಮಾಡಿಕೊಳ್ಳಲು ಆಮದು ಪರವಾನಗಿ ಬೇಕು ಎಂಬ ನಿಯಮಕ್ಕೆ ನವೆಂಬರ್ 1ರವರೆಗೆ ವಿನಾಯಿತಿ ನೀಡಿದೆ. ಹಾಗಾಗಿ, ಆಮದು ಪರವಾನಗಿ ಇಲ್ಲದೆಯೇ ನವೆಂಬರ್ 1ರವರೆಗೆ ಗ್ಯಾಜೆಟ್‌ಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರವು ಏಕಾಏಕಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಪರ್ಸನಲ್ ಕಂಪ್ಯೂಟರ್‌ಗಳ ಆಮದು ನಿರ್ಬಂಧಿಸಿದ ಕಾರಣ ಆಕ್ಷೇಪಗಳು ವ್ಯಕ್ತವಾಗಿದ್ದವು. ಹೊಸ ಮಾರ್ಗಸೂಚಿಗಳಿಗೆ ಹೊಂದಿಕೊಳ್ಳಲು ಕನಿಷ್ಠ ಒಂದು ತಿಂಗಳಾದರೂ ಸಮಯ ಬೇಕು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಹಾಗಾಗಿ, ಕೇಂದ್ರ ಸರ್ಕಾರವು ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂದು ಆಮದು ಪರವಾನಗಿ ನಿಯಮವನ್ನು ಸಡಿಲಗೊಳಿಸಿದೆ.
ಕೇಂದ್ರ ಸರ್ಕಾರ ಮೊದಲು ಹೊರಡಿಸಿದ ಆದೇಶದಂತೆ 2023ರ ಅಕ್ಟೋಬರ್ 1ರಿಂದ ಆಮದು ಮಾಡಿಕೊಳ್ಳಬೇಕಾದರೆ ಇಂಪೋರ್ಟ್ ಲೈಸೆನ್ಸ್‌ಅನ್ನು ಕಡ್ಡಾಯಗೊಳಿಸಿತ್ತು. ಈಗ ಅದನ್ನು ನವೆಂಬರ್ 1ಕ್ಕೆ ವಿಸ್ತರಣೆ ಮಾಡಲಾಗಿದೆ. ನವೆಂಬರ್ 1ರ ನಂತರ ಆಮದು ಪರವಾನಗಿ ಹೊಂದಿರುವವರು ಮಾತ್ರ ಗರಿಷ್ಠ 20 ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಸಂಶೋಧನೆ, ಅಭಿವೃದ್ಧಿ, ತಪಾಸಣೆ, ರಿಪೇರಿ, ಮತ್ತೆ ರಫ್ತು ಮಾಡುವುದು ಹಾಗೂ ಉತ್ಪನ್ನಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪರವಾನಗಿ ಇರುವವರಿಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ವಿಸ್ತಾರ Explainer: ಮೋದಿ ಸರ್ಕಾರ ಲ್ಯಾಪ್‌ಟಾಪ್, ಕಂಪ್ಯೂಟರ್ ಆಮದು ನಿಷೇಧಿಸಿದ್ದೇಕೆ? ದರ ಹೆಚ್ಚಬಹುದಾ?
ಮೇಕ್ ಇನ್ ಇಂಡಿಯಾಗೆ ಉತ್ತೇಜನ
ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುವ ಹಾಗೂ ಭಾರತವು ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಯಲ್ಲಿ ಮಹತ್ವದ ಮುನ್ನಡೆ ಸಾಧಿಸಬೇಕು ಎಂಬ ದೃಷ್ಟಿಯಿಂದ ಇವುಗಳ ಆಮದನ್ನು ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಪರ್ಸನಲ್ ಕಂಪ್ಯೂಟರ್‌ಗಳು ಸೇರಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಆಮದು ಪ್ರಮಾಣ 19.7 ಶತಕೋಟಿ ಡಾಲರ್ ಇದೆ. ಶೇ.6.25ರಷ್ಟು ಆಮದು ಪ್ರಮಾಣ ಏರಿಕೆಯಾಗಿದೆ. ಹಾಗಾಗಿ ಆಮದು ನಿರ್ಬಂಧಿಸಿ, ದೇಶೀಯ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ.