Site icon Vistara News

JKLF Ban: ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಮೋದಿ ಸರ್ಕಾರದಿಂದ ಮತ್ತೊಂದು ಹೊಡೆತ!

Yasin Malik

Central Government extends ban on Yasin Malik’s JKLF-Y for five years

ನವದೆಹಲಿ/ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಕೇಂದ್ರ ಸರ್ಕಾರವು (Central Government) ಪ್ರತ್ಯೇಕವಾದವನ್ನು ನಿಗ್ರಹಿಸಲು ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಪ್ರತ್ಯೇಕವಾದಿ ನಾಯಕ ಯಾಸಿನ್‌ ಮಲಿಕ್‌ (Yasin Malik) ನೇತೃತ್ವದ ಜಮ್ಮು-ಕಾಶ್ಮೀರ ಲಿಬರೇಷನ್‌ ಫ್ರಂಟ್‌ (JKLF Ban) ಮೇಲಿನ ನಿಷೇಧವನ್ನು ಇನ್ನೂ ಐದು ವರ್ಷಗಳವರೆಗೆ ಕೇಂದ್ರ ಗೃಹ ಸಚಿವಾಲಯವು ವಿಸ್ತರಣೆ ಮಾಡಿದೆ. ಆ ಮೂಲಕ ಕಣಿವೆಯಲ್ಲಿ ಪ್ರತ್ಯೇಕವಾದವನ್ನು ಹರಡುವ, ಹಿಂಸೆ, ದಾಳಿಗೆ ಪ್ರಚೋದನೆ ನೀಡುವ ಸಂಘಟನೆಗೆ ಅಂಕುಶ ಹಾಕಿದೆ.

ಕಾನೂನುಬಾಹಿರ ಚುಟವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಜೆಕೆಎಲ್‌ಎಫ್‌ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಐದು ವರ್ಷ ವಿಸ್ತರಣೆ ಮಾಡಿದೆ. 2019ರಲ್ಲಿ ಕೇಂದ್ರ ಸರ್ಕಾರವು ಜೆಕೆಎಲ್‌ಎಫ್‌ಅನ್ನು ನಿಷೇಧಿಸಿತ್ತು. ನಿಷೇಧದ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಹಿತಿ ನೀಡಿದ್ದಾರೆ. “ಭಯೋತ್ಪಾದನೆ ವಿರುದ್ಧ ನರೇಂದ್ರ ಮೋದಿ ಸರ್ಕಾರವು ಶೂನ್ಯ ಸಹಿಷ್ಣುತೆ ಹೊಂದಿದೆ. ಇದರ ಭಾಗವಾಗಿಯೇ, ಜಮ್ಮು-ಕಾಶ್ಮೀರ ಪೀಪಲ್ಸ್‌ ಲೀಗ್‌ (JKPL-ಮುಖ್ತಾರ್‌ ಅಹ್ಮದ್‌ ವಾಜಾ), ಜೆಕೆಪಿಎಲ್‌ (ಬಷೀರ್‌ ಅಹ್ಮದ್‌ ತೋಟಾ), ಜೆಕೆಪಿಎಲ್‌ (ಗುಲಾಂ ಮೊಹಮ್ಮದ್‌ ಖಾನ್)‌, ಜೆಕೆಪಿಎಲ್‌ (ಅಜೀಜ್‌ ಶೇಖ್)‌ ಸಂಘಟನೆಗಳನ್ನು ನಿಷೇಧಿಸಿದೆ” ಎಂದು ಪೋಸ್ಟ್‌ ಮಾಡಿದ್ದಾರೆ. ಇದರ ಜತೆಗೆ ಜೆಕೆಎಲ್‌ಎಫ್‌ ಮೇಲಿನ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾಸಿನ್‌ ಮಲಿಕ್‌ ಜಮ್ಮು-ಕಾಶ್ಮೀರದ ಪ್ರಮುಖ ಪ್ರತ್ಯೇಕವಾದಿಯಾಗಿದ್ದು, ಈತನೀಗ ದೆಹಲಿಯ ತಿಹಾರ ಜೈಲಿನಲ್ಲಿದ್ದಾನೆ. ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈತನು ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಪ್ರಚೋದನೆ, ಕಲ್ಲು ತೂರಾಟಗಾರರಿಗೆ ಹಣಕಾಸು ನೆರವು ನೀಡುತ್ತಿದ್ದ. ಪಾಕಿಸ್ತಾನದ ಉಗ್ರ ಸಂಘಟನೆಗಳ ಜತೆ ಈತ ಸಂಪರ್ಕ ಹೊಂದಿದ್ದ ಎಂಬ ಆರೋಪವೂ ಇದೆ. ಕೇಂದ್ರ ಸರ್ಕಾರವು ಕಳೆದ ಐದು ವರ್ಷದಲ್ಲಿ ಜಮ್ಮು-ಕಾಶ್ಮೀರದಲ್ಲಿ ಹಲವು ಸಂಘಟನೆಗಳನ್ನು ಯುಎಪಿಎ ಅಡಿಯಲ್ಲಿ ನಿಷೇಧಿಸಿದೆ.

ಇದನ್ನೂ ಓದಿ: UAPA : ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ ಸಂಘಟನೆಗೆ 5 ವರ್ಷ ನಿಷೇಧ ಹೇರಿದ ಮೋದಿ ಸರ್ಕಾರ

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು ನಯೀಮ್ ಅಹ್ಮದ್ ಖಾನ್ ನೇತೃತ್ವದ ಜಮ್ಮು ಕಾಶ್ಮೀರ ನ್ಯಾಷನಲ್ ಫ್ರಂಟ್ ಅನ್ನು ಐದು ವರ್ಷ ನಿಷೇಧಿಸಿತ್ತು. ದೇಶದ ಸಮಗ್ರತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಪೂರ್ವಗ್ರಹ ಪೀಡಿತವಾದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಫ್ರಂಟ್ ತೊಡಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ನಿಷೇಧಿಸಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ಪ್ರತ್ಯೇಕವಾದಿ ಸಂಘಟನೆಯ ನಿಷೇಧವನ್ನು ಕೇಂದ್ರ ಸರ್ಕಾರ 5 ವರ್ಷ ವಿಸ್ತರಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version