Site icon Vistara News

LPG Subsidy: ಗೃಹಿಣಿಯರಿಗೆ ಮೋದಿ ಬಂಪರ್; ಎಲ್‌ಪಿಜಿ ಸಿಲಿಂಡರ್‌ಗೆ 300 ರೂ. ಸಬ್ಸಿಡಿ

Ujjwala Scheme

Central Government extends Rs 300 LPG subsidy for Ujjwala beneficiaries for FY25

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ದಿನಗಳು ಬಾಕಿ ಇರುವಾಗಲೇ ದೇಶದ ಗೃಹಿಣಿಯರಿಗೆ ಕೇಂದ್ರ ಸರ್ಕಾರವು (Central Government) ಗುಡ್‌ ನ್ಯೂಸ್‌ ನೀಡಿದೆ. ಉಜ್ವಲ ಯೋಜನೆ ಅಡಿಯಲ್ಲಿ ನೀಡುತ್ತಿರುವ ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ 300 ರೂಪಾಯಿ ಸಬ್ಸಿಡಿಯನ್ನು (LPG Subsidy) 2024-25ನೇ ಹಣಕಾಸು ವರ್ಷದವರೆಗೆ ವಿಸ್ತರಣೆ ಮಾಡಿದೆ. ಇದರೊಂದಿಗೆ ಉಜ್ವಲ ಯೋಜನೆ ಅಡಿಯಲ್ಲಿ 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಖರೀದಿಸುವವರಿಗೆ ಅನುಕೂಲವಾಗಲಿದೆ. ದೇಶದ 10 ಕೋಟಿ ಗೃಹಿಣಿಯರು ಸಬ್ಸಿಡಿಯ ಲಾಭ ಪಡೆಯಲಿದ್ದಾರೆ.

2023ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಎಲ್‌ಪಿಜಿ ಸಬ್ಸಿಡಿಯನ್ನು 200 ರೂಪಾಯಿಂದ 300 ರೂಪಾಯಿಗೆ ಏರಿಕೆ ಮಾಡಿತ್ತು. 2023-24ನೇ ಸಾಲಿನ ಹಣಕಾಸು ವರ್ಷದ ಅಂತ್ಯದವರೆಗೆ 300 ರೂ. ಸಬ್ಸಿಡಿ ನೀಡುವುದಾಗಿ ಘೋಷಿಸಿತ್ತು. 2023-24ನೇ ಸಾಲಿನ ಹಣಕಾಸು ವರ್ಷವು ಮಾರ್ಚ್‌ 31ಕ್ಕೆ ಮುಗಿಯುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮತ್ತೊಂದು ಹಣಕಾಸು ಸಾಲಿಗೆ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ ಸಬ್ಸಿಡಿಯನ್ನು ವಿಸ್ತರಣೆ ಮಾಡಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂಪಾಯಿಗಳ ಸಬ್ಸಿಡಿಯನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಪರಿಷ್ಕೃತ ದರ ಅನ್ವಯ ಈಗ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ 603 ರೂ.ಗೆ ದೊರೆಯಲಿದೆ. ಈಗ ಸಬ್ಸಿಡಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: Arecanut Price: ಅಡಿಕೆ ಧಾರಣೆಯಲ್ಲಿ ದಿಢೀರ್‌ ಕುಸಿತ; ಬೆಲೆ ಇಳಿಕೆಗೆ ಅಕ್ರಮ ಸಾಗಣೆ ಕಾರಣವೇ?

ಮೇ 2016 ರಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯನ್ನು ಒಂದು ಪ್ರಮುಖ ಯೋಜನೆಯಾಗಿ ಪರಿಚಯಿಸಿತು. ಎಲ್‌ಪಿಜಿಯಂತಹ ಶುದ್ಧ ಅಡುಗೆ ಇಂಧನಗಳನ್ನು ಗ್ರಾಮೀಣ ಮತ್ತು ವಂಚಿತ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಉರುವಲು, ಕಲ್ಲಿದ್ದಲು ಬದಲಿಗೆ ಈ ಎಲ್‌ಪಿಜಿ ಸಿಲಿಂಡರ್‌ಗಳ್ನು ಸಬ್ಸಿಡಿ ದರದಲ್ಲಿ ಒದಗಿಸುವುದಾಗಿತ್ತು. ಸಾಂಪ್ರದಾಯಿಕ ಅಡುಗೆ ಇಂಧನಗಳ ಬಳಕೆಯು ಗ್ರಾಮೀಣ ಮಹಿಳೆಯರ ಆರೋಗ್ಯದ ಮೇಲೆ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version