ನವದೆಹಲಿ: ಪ್ರಿಂಟ್ ಆ್ಯಂಡ್ ಡಿಜಿಟಲ್ ಮೀಡಿಯಾ ಅಸೋಸಿಯೇಷನ್(PADMA- ಪದ್ಮ)ಗೆ ಸ್ವ-ನಿಂಯತ್ರಣ ಸಂಘಟನೆಯ ಮಾನ್ಯತೆಯನ್ನು ಕೇಂದ್ರ ಸರ್ಕಾರವು ಒದಗಿಸಿದೆ. 47 ಡಿಜಿಟಲ್ ಸುದ್ದಿ ಪ್ರಕಾಶಕರನ್ನು ಹೊಂದಿರುವ ಸಂಸ್ಥೆಯು ತಮ್ಮ ವೇದಿಕೆಗಳಲ್ಲಿ ಡಿಜಿಟಲ್ ಮಾಧ್ಯಮ ಸುದ್ದಿ ವಿಷಯಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಶೀಲಿಸಿ, ಪರಿಹಾರಗಳನ್ನು ಸೂಚಿಸುತ್ತದೆ.
ಡಿಸೆಂಬರ್ 2ರಂದು ಹೊರಡಿಸಲಾದ ಆದೇಶದಲ್ಲಿ ‘ಪದ್ಮ’ಗೆ ಡಿಜಿಟಲ್ ಮಾಧ್ಯಮಗಳ ಸ್ವ-ನಿಯಂತ್ರಣ ಸಂಸ್ಥೆಯೆಂದು ಗುರುತಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ತಿಳಿಸಿದೆ. ಪ್ರಿಂಟ್ ಮತ್ತು ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅನ್ನು ಸದಸ್ಯ ಪ್ರಕಾಶಕರೊಂದಿಗೆ ಸ್ವಯಂ-ನಿಯಂತ್ರಕ ಸಂಸ್ಥೆಯಾಗಿ ನೋಂದಾಯಿಸಲಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಹೈಕೋರ್ಟ್‌ನ ನಿವೃತ್ತ ಜಡ್ಜ್ ಮೂಲ್ ಚಾಂದ್ ಗಾರ್ಗ್ ಅವರು ಪದ್ಮ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಪ್ರಸಾರ ಭಾರತಿಯ ಅರೆಕಾಲಿಕ ಸದಸ್ಯ ಅಶೋಕ್ ಕುಮಾರ್ ಟಂಡನ್ ಮತ್ತು ಪತ್ರಕರ್ತ ಮನೋಜ್ ಕುಮಾರ್ ಮಿಶ್ರಾ ಅವರು ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆಂದು ಆದೇಶದಲ್ಲಿ ತಿಳಿಸಲಾಗಿದೆ.
2021 ಮೇ ತಿಂಗಳಿನಿಂದ ಈಚೆಗೆ ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳ ಅನುಸಾರ ಒಟ್ಟು 9 ಸ್ವ ನಿಯಂತ್ರಣ ಪ್ರಾಧಿಕಾರಿಗಳಿಗೆ ಮಾನ್ಯತೆಯನ್ನು ನೀಡಲಾಗಿದೆ. ಇದರಲ್ಲಿ ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಷನ್, ಕಾನ್ಫೆಡರೇಷನ್ ಆಫ್ ಆನ್‌ಲೈನ್ ಮೀಡಿಯಾ(ಇಂಡಿಯಾ), ಎನ್‌ಬಿಎಫ್- ಪ್ರೊಫೆಷನಲ್ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಸಂಸ್ಥೆಗಳು ಪ್ರಮುಖವಾದವು.
ಇದನ್ನೂ ಓದಿ | Digital Media | ಡಿಜಿಟಲ್ ಮಾಧ್ಯಮ ನಿಯಂತ್ರಣ, ಡಿಜಿಟಲ್ ಪತ್ರಕರ್ತರಿಗೂ ಮಾನ್ಯತೆ, ಸಚಿವ ಅನುರಾಗ್ ಘೋಷಣೆ ಏನು?