Site icon Vistara News

Raw Jute: ರೈತರಿಗೂ ಮೋದಿ ಸಿಹಿ ಸುದ್ದಿ; ಸೆಣಬು ಬೆಂಬಲ ಬೆಲೆ 285 ರೂ. ಹೆಚ್ಚಳ

Raw Jute

Central Government Hikes MSP for Raw Jute by Rs 285 to Rs 5,335 Per Quintal for FY25

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಗುರುವಾರ (ಮಾರ್ಚ್‌ 7) ನಡೆದ ಸಚಿವ ಸಂಪುಟ ಸಭೆಯಲ್ಲಿ (Union Cabinet Meeting) ಹಲವು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಲ್ಲೂ, ಕೇಂದ್ರ ಸರ್ಕಾರವು (Central Government) ಸೆಣಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ್ದು, ಕಚ್ಚಾ ಸೆಣಬಿಗೆ (Raw Jute) 285 ರೂಪಾಯಿ ಕನಿಷ್ಠ ಬೆಂಬಲ ಬೆಲೆ (MSP For Raw Jute) ಘೋಷಿಸಿದೆ. ಕೇಂದ್ರ ಸರ್ಕಾರವು 2024-25ನೇ ಹಣಕಾಸು ವರ್ಷಕ್ಕಾಗಿ ಬೆಂಬಲ ಬೆಲೆ ಹೆಚ್ಚಿಸಲಾಗಿದ್ದು, ಇದರಿಂದಾಗಿ ಸೆಣಬು ಬೆಳೆಯುವ ರೈತರು ಲಾಭ ಪಡೆಯಲಿದ್ದಾರೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕಚ್ಚಾ ಸೆಣಬಿನ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಒಂದು ಕ್ವಿಂಟಾಲ್‌ಗೆ 285 ರೂ. ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಇದರೊಂದಿಗೆ ಒಂದು ಕ್ವಿಂಟಾಲ್ ಕಚ್ಚಾ ಸೆಣಬಿಗೆ ಸಿಗುವ ಬೆಂಬಲ ಬೆಲೆಯು 5,335 ರೂಪಾಯಿ ಆಗಿದೆ. ಇದುವರೆಗೆ ಕ್ವಿಂಟಾಲ್‌ ಕಚ್ಚಾ ಸೆಣಬಿಗೆ 5,050 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನೀಡಲಾಗುತ್ತಿತ್ತು. ಈಗ ಬೆಂಬಲ ಬೆಲೆಯನ್ನು ಶೇ.5.6ರಷ್ಟು ಬೆಂಬಲ ಬೆಲೆಯನ್ನು ಏರಿಕೆ ಮಾಡಲಾಗಿದೆ. ದೇಶದಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಸೆಣಬು ಬೆಳೆಯಲಾಗುತ್ತದೆ. ಕರ್ನಾಟಕದಲ್ಲೂ ಸೆಣಬು ಬೆಳೆಯುವ ರೈತರಿದ್ದಾರೆ.

ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಕುರಿತು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. “ಕಚ್ಚಾ ಸೆಣಬಿಗೆ ಬೆಂಬಲ ಬೆಲೆ ಏರಿಕೆ ಮಾಡಿರುವುದರಿಂದ ನೇರವಾಗಿ 40 ಲಕ್ಷ ರೈತರ ಕುಟುಂಬಗಳಿಗೆ ಅನುಕೂಲವಾಗಲಿದೆ. ಸೆಣಬು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 5 ಲಕ್ಷ ಕಾರ್ಮಿಕರಿಗೂ ಕೇಂದ್ರ ಸರ್ಕಾರದ ನಿರ್ಧಾರದಿಂದ ಅನುಕೂಲವಾಗಲಿದೆ” ಎಂಬುದಾಗಿ ವಿವರಿಸಿದರು.

ಇದನ್ನೂ ಓದಿ: HD Kumaraswamy : ಕೊಬ್ಬರಿಗೆ ಬೆಂಬಲ ಬೆಲೆ ನೀಡಿದ ಮೋದಿ; ಕುಮಾರಸ್ವಾಮಿ ಫುಲ್‌ ಖುಷ್‌

ಎಲ್‌ಪಿಜಿ ಸಬ್ಸಿಡಿ ವಿಸ್ತರಣೆ

ದೇಶದ ಗೃಹಿಣಿಯರಿಗೆ ಕೂಡ ಕೇಂದ್ರ ಸರ್ಕಾರವು ಗುಡ್‌ ನ್ಯೂಸ್‌ ನೀಡಿದೆ. ಉಜ್ವಲ ಯೋಜನೆ ಅಡಿಯಲ್ಲಿ ನೀಡುತ್ತಿರುವ ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ 300 ರೂಪಾಯಿ ಸಬ್ಸಿಡಿಯನ್ನು (2024-25ನೇ ಹಣಕಾಸು ವರ್ಷದವರೆಗೆ ವಿಸ್ತರಣೆ ಮಾಡಿದೆ. ಈ ಕುರಿತು ಕೇಂದ್ರ ಸಂಪುಟ ಸಭೆಯಲ್ಲಿಯೇ ತೀರ್ಮಾನಿಸಲಾಗಿದೆ. ಇದರೊಂದಿಗೆ ಉಜ್ವಲ ಯೋಜನೆ ಅಡಿಯಲ್ಲಿ 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್‌ ಖರೀದಿಸುವವರಿಗೆ ಅನುಕೂಲವಾಗಲಿದೆ. ದೇಶದ 10 ಕೋಟಿ ಗೃಹಿಣಿಯರು ಸಬ್ಸಿಡಿಯ ಲಾಭ ಪಡೆಯಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version