Site icon Vistara News

Calendar 2024: ಹೊಸ ಕ್ಯಾಲೆಂಡರ್‌ ಪರಿಚಯಿಸಿದ ಕೇಂದ್ರ; ಕ್ಯೂಆರ್‌ ಕೋಡ್‌ನಲ್ಲಿ ಏನೆಲ್ಲ ಮಾಹಿತಿ?

Calendar 2024

Central Government launches 2024 calendar: Scan QR code to know

ನವದೆಹಲಿ: ಭಾರತ ಸೇರಿ ಜಗತ್ತೇ ಹೊಸ ವರ್ಷಕ್ಕೆ ಕಾಲಿಡುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಹೊಸ ವರ್ಷವು (New Year 2024) ಎಲ್ಲರನ್ನೂ ಸ್ವಾಗತಿಸುತ್ತದೆ. ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲು ದೇಶದ ಜನ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು 2024ರ ಹೊಸ ಕ್ಯಾಲೆಂಡರ್‌ಅನ್ನು (Calendar 2024) ಬಿಡುಗಡೆ ಮಾಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ (Anurag Thakur) ಅವರು ನೂತನ ಕ್ಯಾಲೆಂಡರ್‌ಅನ್ನು ಅನಾವರಣಗೊಳಿಸಿದ್ದಾರೆ. ಇದು ಜನರಿಗೆ ದಿನಾಂಕ, ರಜೆ, ವಾರದ ಜತೆಗೆ ಹತ್ತಾರು ಮಾಹಿತಿ ನೀಡಲಿದೆ ಎಂಬುದು ವಿಶೇಷವಾಗಿದೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನುರಾಗ್‌ ಠಾಕೂರ್‌ ಅವರು ಕೇಂದ್ರ ಸರ್ಕಾರದ ‘ಹಮಾರ ಸಂಕಲ್ಪ-ವಿಕಸಿತ ಭಾರತ’ ಎಂಬ ನೂತನ ಕ್ಯಾಲೆಂಡರ್‌ಅನ್ನು ಅನಾವರಣಗೊಳಿಸಿದರು. “ದೇಶದ ಅಭಿವೃದ್ಧಿಯನ್ನು ಸಾರುವ ನೂತನ ಕ್ಯಾಲೆಂಡರ್‌ಅನ್ನು ಅನಾವರಣಗೊಳಿಸಿದ್ದು ಸಂತಸ ತಂದಿದೆ. ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಏಳಿಗೆಯ ಕುರಿತು ಹೊಸ ನಿರ್ಣಯಗಳನ್ನು ತೆಗೆದುಕೊಳ್ಳೋಣ. ಆ ಮೂಲಕ ದೇಶದ ಏಳಿಗೆಗೆ ನಾವು ಕೂಡ ಕೊಡುಗೆ ನೀಡೋಣ” ಎಂದು ಅನುರಾಗ್‌ ಠಾಕೂರ್‌ ಕರೆ ನೀಡಿದರು.

ಕ್ಯಾಲೆಂಡರ್‌ ವಿಶೇಷ ಏನು?

ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ನೂತನ ಕ್ಯಾಲೆಂಡರ್‌ ಹಲವು ವಿಶೇಷತೆಗಳನ್ನು ಹೊಂದಿದೆ. ಅದರಲ್ಲೂ, ಕೇಂದ್ರ ಸರ್ಕಾರದ ಕಳೆದ 9 ವರ್ಷದ ಸಾಧನೆಗಳನ್ನು ಕ್ಯಾಲೆಂಡರ್‌ನಲ್ಲಿ ವಿವರಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದವರು ಕ್ಯಾಲೆಂಡರ್‌ ಮೇಲಿರುವ ಕ್ಯೂಆರ್‌ ಕೋಡ್‌ಅನ್ನು ಸ್ಕ್ಯಾನ್‌ ಮಾಡುವ ಮೂಲಕ ಕೇಂದ್ರ ಸರ್ಕಾರದ ಯೋಜನೆಗಳು, ತೆಗೆದುಕೊಂಡ ಕಠಿಣ ನಿರ್ಧಾರಗಳು ಸೇರಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ರತಿಯೊಂದು ತಿಂಗಳ ಮಾಹಿತಿ ಜತೆಗೆ ಸಾಧನೆಗಳ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ: New Year 2024: ಹೊಸ ವರ್ಷದಲ್ಲಿ ಹಣ ಉಳಿತಾಯ ಮಾಡಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

“ರೈತರು, ಮಹಿಳೆಯರು, ಬಡವರು ಸೇರಿ ಎಲ್ಲ ವರ್ಗದವರಿಗೆ ಕೇಂದ್ರ ಸರ್ಕಾರದಿಂದ ಯಾವ ಯೋಜನೆಗಳು ತಲುಪಿವೆ, ಯೋಜನೆಗಳಿಂದ ಎಷ್ಟು ಕೋಟಿ ಜನ ಲಾಭ ಪಡೆದಿದ್ದಾರೆ, ಯೋಜನೆಗಳ ಲಾಭವನ್ನು ಪಡೆಯಬೇಕು ಎಂಬುದು ಸೇರಿ ಹಲವು ಮಾಹಿತಿಯನ್ನು ಕ್ಯಾಲೆಂಡರ್‌ನಲ್ಲಿ ಒದಗಿಸಲಾಗಿದೆ” ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆಯಾ ತಿಂಗಳಿಗೆ ಒಂದು ಘೋಷವಾಕ್ಯ ಎಂಬುದಾಗಿ ವಿಂಗಡಿಸಿ, ಆಯಾ ತಿಂಗಳು ಒಂದೊಂದು ವಿಷಯದ ಕುರಿತು, ಅಭಿವೃದ್ಧಿ ಯೋಜನೆಗಳು ಜನರಿಗೆ ತಲುಪಿದ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version