ನವದೆಹಲಿ: ಜಗತ್‌ಪ್ರಸಿದ್ಧ ಯಾಲೆ, ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್‌ಗಳಂಥ ವಿದೇಶಿ ವಿಶ್ವವಿದ್ಯಾಲಯಗಳು (Foreign university) ಇನ್ನು ಮುಂದೆ ಭಾರತದಲ್ಲೂ ತಮ್ಮ ಕಾರ್ಯಾಚರಣೆಯನ್ನು ಶುರು ಮಾಡಲಿವೆ. ಭಾರತದಲ್ಲಿ ವಿದೇಶಿ ವಿವಿಗಳನ್ನು ಶುರು ಮಾಡುವುದಕ್ಕೆ ಕೇಂದ್ರ ಸರ್ಕಾರವು ಶೀಘ್ರವೇ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(UGC) ಗುರುವಾರ, ಮೊದಲ ಬಾರಿಗೆ ದೇಶದಲ್ಲಿ ಸಾಗರೋತ್ತರ ಸಂಸ್ಥೆಗಳ ಪ್ರವೇಶ ಮತ್ತು ಕಾರ್ಯಾಚರಣೆ ಕುರಿತಾದ ಕರಡಿಗೆ ಸಾರ್ವಜನಿಕ ಪ್ರತಿಕ್ರಿಯೆ ಆಹ್ವಾನಿಸಿದೆ. ಈ ವಿವಿಗಳ ಸ್ಥಳೀಯ ಕ್ಯಾಂಪಸ್‌ಗಳು, ದೇಶಿ ಮತ್ತು ಸ್ವದೇಶಿ ವಿದ್ಯಾರ್ಥಿಗಳ ಪ್ರವೇಶಾತಿ, ಬೋಧನಾ ಶುಲ್ಕ, ಸ್ಕಾಲರ್‌ಶಿಪ್‌ಗಳನ್ನು ನಿರ್ಧರಿಸಲಿವೆ ಎಂದು ಕರಡಿನಲ್ಲಿ ತಿಳಿಸಲಾಗಿದೆ. ಜತಗೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಕ್ಕೆ ಸ್ವಾಯತ್ತ ಸ್ವಾತಂತ್ರ್ಯವನ್ನು ಈ ಸಂಸ್ಥೆಗಳು ಹೊಂದಿರುತ್ತವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಸಿಕ್ಕಾಪಟ್ಟೆ ನಿಯಂತ್ರಣಕ್ಕೆ ಒಳಪಟ್ಟರುವ ದೇಶದ ಶಿಕ್ಷಣ ವಲಯವನ್ನು ಮುಕ್ತಗೊಳಿಸಿ, ಭಾರತೀಯ ವಿದ್ಯಾರ್ಥಿಗಳು ವಿದೇಶಿ ಶೈಕ್ಷಣಿಕ ಗುಣಮಟ್ಟವನ್ನು ಕೈಗೆಟುಕುವ ವೆಚ್ಚದಲ್ಲಿ ಪಡೆಯುವುದಕ್ಕೆ ಬೇಕಾಗುವ ನೀತಿಗಳನ್ನು ಜಾರಿಗೆ ತರುತ್ತದೆ. ಆ ಮೂಲಕ ಜಾಗತಿಕ ವಿದ್ಯಾರ್ಥಿಗಳನ್ನು ಭಾರತದತ್ತ ಸೆಳೆಯುವ ಕೆಲಸವನ್ನು ಮಾಡಲಾಗುತ್ತಿದೆ. ಸರ್ಕಾರದ ಈ ನಡೆಯು, ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕಾರ್ಯಾಚರಿಸಲು ನೆರವು ಒದಗಿಸಲಿದೆ.
ಇದನ್ನೂ ಓದಿ | ಕರ್ನಾಟಕದಲ್ಲಿ ಕ್ಯಾಂಪಸ್ ತೆರೆಯಲು ವಿದೇಶಿ ವಿವಿಗಳ ಆಸಕ್ತಿ: ಸಚಿವ ಅಶ್ವತ್ಥನಾರಾಯಣ