Site icon Vistara News

CAA Rules: ಕೇಂದ್ರ ಸರ್ಕಾರದಿಂದ ಶೀಘ್ರವೇ ಸಿಎಎ ನಿಯಮಗಳ ಅಧಿಸೂಚನೆ?

Central Government may notify CAA Rules?

ನವದೆಹಲಿ: ಪಾಕಿಸ್ತಾನ(Pakistan), ಬಾಂಗ್ಲಾದೇಶ (Bangla Desh) ಮತ್ತು ಆಫ್ಘಾನಿಸ್ತಾನದಿಂದ (Afghanistan) ಭಾರತಕ್ಕೆ ವಲಸೆ ಬರುವ ಹಿಂದೂಗಳು(Hindus), ಸಿಖ್ಖರು, ಬೌದ್ಧ ಧರ್ಮೀಯರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಭಾರತದಲ್ಲಿ ಪೌರತ್ವ ನೀಡುವ ‘2019 ಪೌರತ್ವ ಕಾಯ್ದೆ’ಯ (2019 Citizenship Amendment Act – CAA) ಜಾರಿ ಕುರಿತಾದ ನಿಯಮಗಳ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರವು ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೇಂದ್ರ ಸರ್ಕಾರವು ಶೀಘ್ರದಲ್ಲೇ ಸಿಎಎ ನಿಯಮಗಳನ್ನು ಬಹಿರಂಗಗೊಳಿಸಬಹುದು. ಆ ಬಳಿಕವಷ್ಟೇ ರಾಷ್ಟ್ರೀಯ ಜನಗಣತಿಯನ್ನು ನಡೆಸಲಾಗುವುದು. ರಾಷ್ಟ್ರೀಯ ಜನಗಣತಿಯ ನಂತರ, ಸರ್ಕಾರವು ಕ್ಷೇತ್ರಗಳ ಪುನರ್ ವಿಂಗಡನೆ ಕಾರ್ಯಕ್ಕೆ ಮುಂದಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ವರದಿ ಮಾಡಿದೆ.

2019ರಲ್ಲೇ ಸಿಎಎ ತಿದ್ದುಪಡಿ ಜಾರಿಯಾದರೂ ನಿಯಮಗಳ ಅಧಿಸೂಚನೆ ಹೊರಡಿಸಿರಲಿಲ್ಲ. ಈ ಕಾಯ್ದೆಯ ಅನ್ವಯ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹಿಂದೂಗಳು, ಸಿಖ್‌ಗಳು, ಬೌದ್ಧರು, ಪಾರ್ಸಿಗಳು, ಜೈನರು ಮತ್ತು ಕ್ರಿಶ್ಚಿಯನ್ನರು ಡಿಸೆಂಬರ್ 31, 2014 ರಂದು ಅಥವಾ ಮೊದಲು ಭಾರತಕ್ಕೆ ಪ್ರವೇಶಿಸಿದ್ದರೆ ಅಂಥವರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಅವಕಾಶವನ್ನು ಈ ಸಿಎಎ ಒದಗಿಸುತ್ತದೆ. ಕೇವಲ ಧರ್ಮವೇ ಭಾರತೀಯ ಪೌರತ್ವ ಪಡೆಯಲು ಮಾನದಂಡವಾದ್ದರಿಂದ ದೇಶಾದ್ಯಂತ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು.

ಸಿಎಎ ವಿರೋಧಿಸಿ 2019 ರಲ್ಲಿ ಭಾರೀ ಪ್ರತಿಭಟನೆಗಳು ಕೂಡ ನಡೆದವು. ಅನೇಕ ರಾಜಕೀಯ ನಾಯಕರು ಸಿಎಎ ಅನ್ನು ರಾಷ್ಟ್ರೀಯ ನಾಗರಿಕರ ನೋಂದಣಿ(NRC)ಗೆ ಸಂಪರ್ಕ ಕಲ್ಪಿಸಿದ್ದರಿಂದ ಗೊಂದಲವು ಉಂಟಾಯಿತು. ಈ ಮಧ್ಯೆ, ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಜೋರಾದ್ದರಿಂದ ಪ್ರತಿಭಟನೆಗಳನ್ನು ಕೈ ಬಿಡಲಾಯಿತು.

ಈ ಸುದ್ದಿಯನ್ನೂ ಓದಿ: Citizenship Grant | ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೂ ಮುಸ್ಲಿಮೇತರರಿಗೆ ಪೌರತ್ವ ನೀಡುವ ಅಧಿಕಾರ, ಕೇಂದ್ರ ನಿರ್ಧಾರ

ಅಲ್ಲದೇ, ಕೋವಿಡ್ ಕಾರಣದಿಂದಾಗಿ ಸಿಎಎ ಜಾರಿ ಸಂಬಂಧ ನಿಯಮಗಳನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರ ಕೂಡ ವಿಳಂಬ ಮಾಡಿತು. ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿಭಾಯಿಸುವುದು ಮೊದಲ ಆದ್ಯತೆಯಾದ್ದರಿಂದ ನಿಯಮಗಳನ್ನು ರಚಿಸಲು ಕೇಂದ್ರ ಸರ್ಕಾರವು ಮುಂದಾಗಲಿಲ್ಲ. ಈಗ ಮತ್ತೆ ಸಿಎಎ ಕುರಿತು ಅಧಿಸೂಚನೆ ಹೊರಡಿಸಲು ಸರ್ಕಾರವು ಈಗ ಮುಂದಾಗಿದೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಅದೇ ಕಾರಣಕ್ಕೆ ಕೇಂದ್ರ ಸರ್ಕಾರವು ಮತ್ತೆ ಸಿಎಎಯತ್ತ ತನ್ನ ಕಣ್ಣು ನೆಟ್ಟಿದೆ ಎಂದು ಹೇಳಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version