ನವ ದೆಹಲಿ: ವೈಯುಕ್ತಿಕ ಮಾಹಿತಿ ರಕ್ಷಣಾ ಮಸೂದೆ-2019 (Personal Data Protection Bill, 2019) ಯಲ್ಲಿ 81 ತಿದ್ದುಪಡಿಗಳಿಗೆ ಜಂಟಿ ಸಂಸದೀಯ ಸಮಿತಿಯು ಸೂಚಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಮಸೂದೆಯನ್ನು ಬುಧವಾರ ಹಿಂದಕ್ಕೆ ಪಡೆದಿದೆ.
ಸರ್ಕಾರದ ಮೂಲಗಳ ಪ್ರಕಾರ ಜಂಟಿ ಸಂಸದೀಯ ಸಮಿತಿಯು ನೀಡಿರುವ ಸೂಚನೆಗಳನ್ನು ಪರಿಗಣಿಸಿ, ಹೊಸದಾಗಿ ಮಸೂದೆಯನ್ನು ರೂಪಿಸಲಾಗುತ್ತದೆ. ಸದ್ಯವೇ ಇದನ್ನು ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಹೊಸ ಮಸೂದೆ ಮಂಡನೆಯಾಗಲಿದೆ.
ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಸಂಸದರು ವೈಯುಕ್ತಿಕ ಮಾಹಿತಿ ಸೋರಿಕೆಯಾಗುವ ಕುರಿತು ಆತಂಕ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು. ಈ ಮಸೂದೆ ಜಾರಿಗೆ ಬಂದರೆ ನಾಗರಿಕರ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆಯೂ ಆಗಲಿದೆ ಎಂದು ದೂರಿದ್ದರು.
ಹೀಗಾಗಿ ಈ ಮಸೂದೆಯ ಪರಿಶೀಲನೆಗೆ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿಯೇ ಜಂಟಿ ಸಂಸದೀಯ ಸಮಿತಿಯು ತನ್ನ ವರದಿಯನ್ನು ಒಪ್ಪಿಸಿತ್ತು. ಈ ವರದಿಯಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸದಸ್ಯರು ವರದಿಗೆ ಭಿನ್ನಾಭಿಪ್ರಾಯ ದಾಖಲಿಸಿದ್ದರು. ಈ ಮಸೂದೆಯಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
2018 ರಲ್ಲಿ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ನೇತೃತ್ವದ ಪರಿಣಿತ ಸಮಿತಿ ಈ ಮಸೂದೆಯನ್ನು ರೂಪಿಸಿತ್ತು. ಕೇಂದ್ರ ಸರ್ಕಾರವು 2019 ರಲ್ಲಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಅದನ್ನು ಅದೇ ವರ್ಷ ಡಿಸೆಂಬರ್‌ನಲ್ಲಿ ಜಂಟಿ ಸಂಸದೀಯ ಸಮಿತಿಯ ಮುಂದಿಡಲಾಯಿತು. ಸಮಿತಿಯ ವರದಿಗೆ ತಿದ್ದುಪಡಿ ಸೂಚಿಸಿದ ನಂತರ ಡಿಸೆಂಬರ್ 2021 ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು.
ಇದನ್ನೂ ಓದಿ| ಸಂಸತ್ ಭವನದ ಎದುರು ಪ್ರತಿಭಟನೆಗಿಲ್ಲ ಅವಕಾಶ; ಮತ್ತೆ ಟೀಕೆಗೆ ಗುರಿಯಾದ ಕೇಂದ್ರ ಸರ್ಕಾರ