Site icon Vistara News

Agniveers: ಅಗ್ನಿವೀರರಿಗೆ ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ 10% ಹುದ್ದೆಗಳು ಮೀಸಲು; ಕೇಂದ್ರದಿಂದ ಮಹತ್ವದ ತೀರ್ಮಾನ

Agniveers

Central Government reserves 10 per cent constable posts for ex-Agniveer in central armed police forces

ನವದೆಹಲಿ: ಭಾರತೀಯ ಸೇನೆಗೆ (Indian Army) ಕಿರು ಅವಧಿಗೆ ಸೇರ್ಪಡೆಯಾಗುವ ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸಬೇಕು, ಇದರಲ್ಲಿ ಮಾರ್ಪಾಡು ತರಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಅಗ್ನಿವೀರರಿಗೆ (Agniveers) ಸಿಹಿ ಸುದ್ದಿ ನೀಡಿದೆ. ಅಗ್ನಿಪಥ ಯೋಜನೆ (Agnipath Scheme) ಅಡಿಯಲ್ಲಿ ನಾಲ್ಕು ವರ್ಷ ಅಗ್ನಿವೀರರಾಗಿ ಸೇವೆ ಸಲ್ಲಿಸುವವರಿಗೆ ಕೇಂದ್ರ ಸರ್ಕಾರವು (Central Government) ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ (CAPF) ಶೇ.10ರಷ್ಟು ಹುದ್ದೆಗಳನ್ನು ಮೀಸಲಿರಿಸುವುದಾಗಿ ಘೋಷಿಸಿದೆ. ಇದರಿಂದ ಅಗ್ನಿವೀರರಾಗಿ ಸೇವೆ ಸಲ್ಲಿಸಿದವರಿಗೆ ಭಾರಿ ಅನುಕೂಲವಾಗಲಿದೆ.

ಅಗ್ನಿವೀರರಾಗಿ ಸೇವೆ ಸಲ್ಲಿಸುವವರಿಗೆ ಸಿಎಪಿಎಫ್‌ನಲ್ಲಿ ಶೇ.10ರಷ್ಟು ಹುದ್ದೆಗಳನ್ನು ಮೀಸಲಿಡುವ ಜತೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳಿಗೆ (CISF) ಸೇರ್ಪಡೆಯಾಗಲು ಬಯಸುವವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. “ನಿವೃತ್ತ ಅಗ್ನಿವೀರರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಯಿಂದ ವಿನಾಯಿತಿ ನೀಡುವ ದಿಸೆಯಲ್ಲಿ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ” ಎಂಬುದಾಗಿ ಸಿಐಎಸ್‌ಎಫ್‌ ತಿಳಿಸಿದೆ. ಇದು ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಎಂದೇ ಹೇಳಲಾಗುತ್ತಿದೆ.

ಪ್ರಸ್ತುತ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಶೇ. 25ರಷ್ಟು ಅಗ್ನಿವೀರರನ್ನು ಮಾತ್ರ ಉಳಿಸಿಕೊಳ್ಳುವ ನಿಯಮವಿದೆ. ಉಳಿದ ಶೇ. 75ರಷ್ಟು ಮಂದಿ ನಿವೃತ್ತಿ ಪಡೆಯುತ್ತಾರೆ. ಸದ್ಯ ಅಗ್ನಿವೀರರು 4 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ 9 ತಿಂಗಳು ತರಬೇತಿಗೆ ಮೀಸಲಿಡಲಾಗಿದೆ. ತರಬೇತಿ ಕಳೆದು ಉಳಿದ ಅಭ್ಯರ್ಥಿಗಳು 3 ವರ್ಷ, 3 ತಿಂಗಳು ಸೇವೆ ಸಲ್ಲಿಸುತ್ತಾರೆ. 17.5 ಮತ್ತು 21 ವರ್ಷದವರನ್ನು ಅಗ್ನಿವೀರರನ್ನಾಗಿ ನೇಮಿಸಲಾಗುತ್ತದೆ.

ಅಲ್ಪಾವಧಿಗೆ ನೇಮಕಾತಿ ನಡೆಸಲಾಗುವ ಅಗ್ನಿಪಥ್ ಯೋಜನೆಯ ಬಗ್ಗೆ ಕೆಲವರು ಈ ಹಿಂದೆಯೇ ಅಪಸ್ವರ ಎತ್ತಿದ್ದಾರೆ. ಇದು ಉದ್ಯೋಗ ಅಭದ್ರತೆ ಮತ್ತು ಮಿಲಿಟರಿ ಸಿಬ್ಬಂದಿಯ ಅಪೂರ್ಣ ತರಬೇತಿಗೆ ಕಾರಣವಾಗಬಹುದು ಎಂದು ಕೆಲವರು ವಾದಿಸುತ್ತಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಭಾಗವಾಗಿರುವ ಜೆಡಿಯು ಮತ್ತು ಎಲ್‌ಜೆಪಿ (ಆರ್‌ವಿ) ಕೂಡ ಯೋಜನೆಯನ್ನು ಪರಿಶೀಲಿಸುವಂತೆ ಸೂಚಿಸಿದೆ.

ಕೇಂದ್ರ ಸರ್ಕಾರ 2022ರಲ್ಲಿ ಪರಿಚಯಿಸಿದ, ಭಾರತೀಯ ಸೇನೆಯಲ್ಲಿ ಕಿರು ಅವಧಿಗೆ ಸೇವೆ ಸಲ್ಲಿಸುವ ‘ಅಗ್ನಿವೀರ್’‌ ಯೋಜನೆಗೆ ದೇಶಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರುವ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಯುವಜನತೆಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ.

ಇದನ್ನೂ ಓದಿ: Viral News : ಅಗ್ನಿಪಥ ಯೋಜನೆಯಡಿ ಸೇನೆ ಸೇರಲಿದ್ದಾಳೆ ಖ್ಯಾತ ನಟ, ಸಂಸದನ ಮಗಳು!

Exit mobile version