ನವದೆಹಲಿ: ಸೆಪ್ಟೆಂಬರ್ 18ರಿಂದ ಐದು ದಿನಗಳ ಕಾಲ ವಿಶೇಷ ಸಂಸತ್ ಅಧಿವೇಶನವನ್ನು (Special Parliament session) ನಡೆಸುವುದಾಗಿ ಕೇಂದ್ರ ಸರ್ಕಾರ (Central Government) ಹೇಳಿತ್ತು. ಆದರೆ, ಯಾವುದೇ ಅಜೆಂಡಾವನ್ನು ಬಿಡುಗಡೆ ಮಾಡಿರಲಿಲ್ಲ. ಹಾಗಾಗಿ, ನಾನಾ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿತ್ತು. ಈಗ ವಿಶೇಷ ಅಧಿವೇಶನದ ಕಾರ್ಯಸೂಚಿಯ ತಾತ್ಕಾಲಿಕ ಪಟ್ಟಿಯನ್ನು (tentative list) ಸರ್ಕಾರವು ಬಿಡುಗಡೆ ಮಾಡಿದೆ. ಈ ಕಾರ್ಯಸೂಚಿಯ ಪ್ರಕಾರ, ವಿಶೇಷ ಅಧಿವೇಶನದಲ್ಲಿ 2023ರ ವಕೀಲರ ತಿದ್ದುಪಡಿ ವಿಧೇಯಕ ಹಾಗೂ 2023ರ ನಿಯತಕಾಲಿಕಗಳ ಮುದ್ರಣ ಮತ್ತು ನೋಂದಣಿ ವಿಧೇಯಕವನ್ನು ವಿಶೇಷ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ಈ ಎರಡೂ ವಿಧೇಯಕಗಳು ಈ ಹಿಂದೆ ಆಗಸ್ಟ್ 3ರಂದು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿವೆ.
ಮತ್ತೊಂದೆಡೆ, ರಾಜ್ಯಸಭಾ ಸಂಸದರು 2023ರ ಪೋಸ್ಟ್ ಆಫೀಸ್ ವಿಧೇಯಕ ಮತ್ತು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ವಿಧೇಯಕವನ್ನು ಚರ್ಚಿಸಲಿದ್ದಾರೆ. ಈ ಎರಡೂ ವಿಧೇಯಕಗಳನ್ನು ಆಗಸ್ಟ್ 10ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.
ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಪ್ರಸ್ತಾಪಿಸುವ ಬಗ್ಗೆ ಊಹಾಪೋಹಗಳಿದ್ದರೂ, ಈಗ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ತಾತ್ಕಾಲಿಕ ಕಾರ್ಯಸೂಚಿಯಲ್ಲಿ ಆ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ವಿಶೇಷ ಸಂಸತ್ ಅಧಿವೇಶನದಲ್ಲಿ ಇಂಡಿಯಾ ಪದದ ಬದಲಿಗೆ ಭಾರತ ಪದವನ್ನು ಬಳಸುವ ಸಂಬಂಧ ಕೇಂದ್ರ ಸರ್ಕಾರವು ವಿಧೇಯಕ ಮಂಡಿಸಲಿದ ಎಂಬ ಊಹಾಪೋಹಗಳೂ ಕೂಡ ಇವೆ.
ಔಪಚಾರಿಕ ಸಂಸದೀಯ ವ್ಯವಹಾರಗಳ ಹೊರತಾಗಿ, ಸರ್ಕಾರದ ಸೂಚನೆಯಂತೆ ‘ಸಂವಿಧಾನ ಸಭೆಯಿಂದ ಆರಂಭವಾದ 75 ವರ್ಷಗಳ ಸಂಸತ್ತಿನ ಪಯಣ- ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆಗಳು’ ವಿಷಯದ ಕುರಿತು ಚರ್ಚೆ ನಡೆಯಲಿದೆ.
ಸರ್ವಪಕ್ಷಗಳ ಸಭೆ
ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗುವ ಒಂದು ದಿನದ ಮುಂಚೆಯೇ ಕೇಂದ್ರ ಸರ್ಕಾರವು ಸರ್ವ ಪಕ್ಷಗಳ ಸಭೆಯನ್ನು ಕರೆದಿದೆ. ಸಭೆಯಲ್ಲಿ ಪಾಲ್ಗೊಳ್ಳುವಂತೆ ವಿರೋಧ ಪಕ್ಷಗಳ ಎಲ್ಲ ನಾಯಕರಿಗೆ ಇ-ಮೇಲ್ ಮೂಲಕ ಆಹ್ವಾನ ಕಳುಹಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಹೊಸ ಸಂಸತ್ ಭವನದಲ್ಲಿ ಅಧಿವೇಶನ
ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಿರುವ ನೂತನ ಸಂಸತ್ ಭವನಕ್ಕೆ (New Parliament Building) ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಆದರೆ, ಇದುವರೆಗೆ ಸಂಸತ್ ಕಲಾಪಗಳು ನೂತನ ಸಂಸತ್ ಭವನದಲ್ಲಿ ನಡೆದಿರಲಿಲ್ಲ. ಆದರೀಗ ನೂತನ ಸಂಸತ್ ಭವನದಲ್ಲಿ ಕಲಾಪ (Special Parliament Session) ಆರಂಭಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಗಣೇಶ ಚತುರ್ಥಿಯ (ಸೆಪ್ಟೆಂಬರ್ 19) ಶುಭದಿನದಂದೇ ಹೊಸ ಸಂಸತ್‌ನಲ್ಲಿ ಕಲಾಪ ನಡೆಯಲಿವೆ ಎಂದು ವರದಿಯೊಂದು ತಿಳಿಸಿದೆ.
ಈ ಸುದ್ದಿಯನ್ನೂ ಓದಿ: New Parliament Building: ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ; ಈ ಶುಭ ದಿನದಂದು ಶಿಫ್ಟ್
ಹೌದು, ಸೆಪ್ಟೆಂಬರ್ 18ರಿಂದ 22ರವರೆಗೆ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ. ಒಂದು ದೇಶ, ಒಂದು ಚುನಾವಣೆ ದೃಷ್ಟಿಯಿಂದ ವಿಧೇಯಕ ಮಂಡನೆ ಸೇರಿ ಹಲವು ಅಜೆಂಡಾಗಳು ಕೇಂದ್ರ ಸರ್ಕಾರದ ಮುಂದಿವೆ. ಸೆಪ್ಟೆಂಬರ್ 18ರಂದು ಹಳೆಯ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಲಿದೆ. ಆರಂಭವಾದ ಮರುದಿನ ಅಂದರೆ ಸೆಪ್ಟೆಂಬರ್ 19ರಂದೇ ನೂತನ ಸಂಸತ್ ಭವನದಲ್ಲಿ ಮೊದಲ ಅಧಿವೇಶನ ಆರಂಭವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.