ನವದೆಹಲಿ: ಜಾರ್ಖಂಡ್‌ನಲ್ಲಿರುವ ಜೈನರ ಪವಿತ್ರ ಯಾತ್ರಾಸ್ಥಳ ಶ್ರೀ ಸಮ್ಮೇದ್ ಶಿಖರ್ಜಿ (Sammed Shikharji Issue)ಯನ್ನು ಪ್ರವಾಸಿ ಸ್ಥಳ ಎಂಬುದಾಗಿ ಘೋಷಿಸಿದ ಜಾರ್ಖಂಡ್ ಸರ್ಕಾರದ ವಿರುದ್ಧ ಜೈನ ಸಮುದಾಯವು ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಾರ್ಖಂಡ್ ಸರ್ಕಾರದ ಆದೇಶಕ್ಕೆ ಕೇಂದ್ರ ಸರ್ಕಾರ ತಡೆ ನೀಡಿದೆ. ಹಾಗೆಯೇ, ಯಾತ್ರಾ ಸ್ಥಳದ ಪಾವಿತ್ರ್ಯತೆ ಕಾಪಾಡುವಂತೆ ಕೇಂದ್ರವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಕರ್ನಾಟಕ, ದೆಹಲಿ, ಪಂಜಾಬ್, ಮಹಾರಾಷ್ಟ್ರ ಸೇರಿ ದೇಶಾದ್ಯಂತ ಜೈನ ಸಮುದಾಯದವರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಸಮುದಾಯದ ಮುಖಂಡರ ಜತೆ ಗುರುವಾರ ಸಭೆ ನಡೆಸಿದರು.
ಇದಾದ ಬಳಿಕ ಜಾರ್ಖಂಡ್‌ನ ಗಿರಿಧ್ ಜಿಲ್ಲೆ ಪರಸ್ನಾಥ್ ಗಿರಿ ಪ್ರದೇಶದಲ್ಲಿರುವ ಸಮ್ಮೇದ್ ಶಿಖರ್ಜಿ ಯಾತ್ರಾ ಸ್ಥಳದ ಪಾವಿತ್ರ್ಯತೆ ಕಾಪಾಡಬೇಕು. ಯಾವುದೇ ಪ್ರವಾಸಿ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ನೀಡಬಾರದು. ಯಾತ್ರಾ ಸ್ಥಳದ ಸುತ್ತ ಮದ್ಯಪಾನ ಸೇರಿ ಯಾವುದೇ ಚಟುವಟಿಕೆಗೆ ಆಸ್ಪದ ನೀಡಬಾರದು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇದಾದ ನಂತರ ಜೈನ ಸಮುದಾಯವು ಪ್ರತಿಭಟನೆಯನ್ನು ಹಿಂಪಡೆದಿದೆ.
ಜೈನ ಧರ್ಮದ 24 ತೀರ್ಥಂಕರರಲ್ಲಿ 20 ಜನ ಶ್ರೀ ಸಮ್ಮೇದ್ ಶಿಖರ್ಜಿಯಲ್ಲಿಯೇ ಮೋಕ್ಷ ಪಡೆದರು ಎಂಬ ನಂಬಿಕೆಯ ಕಾರಣ ಜೈನರಿಗೆ ಇದು ಸೂಕ್ಷ್ಮ ವಿಷಯವಾಗಿದೆ. ಹಾಗಾಗಿಯೇ ಜಾರ್ಖಂಡ್ ಸರ್ಕಾರದ ತೀರ್ಮಾನದ ವಿರುದ್ಧ ದೇಶಾದ್ಯಂತ ಜೈನರು ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ | Jain Community Protest | ಸಮ್ಮೇದ್ ಶಿಖರ್ಜಿ ಪ್ರವಾಸಿ ಸ್ಥಳ ಘೋಷಣೆ, ದೇಶಾದ್ಯಂತ ಬೀದಿಗಿಳಿದು ಜೈನ ಸಮುದಾಯ ಆಕ್ರೋಶ