ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Tamil Nadu CM M K Stalin) ಪುತ್ರ, ಸಚಿವರೂ ಆದ ಉದಯನಿಧಿ ಸ್ಟಾಲಿನ್ (Minister Udayanidhi Stalin) ಅವರು, “ಸನಾತನ ಧರ್ಮವು (Sanatan Dharma) ಮಲೇರಿಯಾ, ಕೊರೊನಾ ಹಾಗೂ ಡೆಂಗ್ಯೂ ಇದ್ದಂತೆ” ಎಂದು ಹೇಳಿದ್ದು ಬಿಜೆಪಿಗೆ ಹೊಸ ರಾಜಕೀಯ ಅಸ್ತ್ರ ನೀಡಿದಂತಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Central Home Minister Amit Shah) ಅವರು, ಈ ವಿಷಯಕ್ಕೆ ಕುರಿತಂತೆ ದ್ರಾವಿಡ ಮುನ್ನೇತ್ರ ಕಳಗಂ (DMK) ಮತ್ತು ಕಾಂಗ್ರೆಸ್ (Congress Party) ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಮತ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ ಭಾರತದ ಸಂಸ್ಕೃತಿ ಮತ್ತು ಇತಿಹಾಸವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
ಕಳೆದ ಎರಡು ದಿನಗಳಿಂದ ಕೆಲವು ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರು ಸನಾತನ ಧರ್ಮವನ್ನು ಅವಮಾನಿಸುತ್ತಿದ್ದಾರೆ. ಸನಾತನ ಧರ್ಮವನ್ನು ಅಳಿಸಿ ಹಾಕಬೇಕು ಎಂದು ಹೇಳುತ್ತಿದ್ದಾರೆ. ತಮ್ಮ ಮತ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ ಸನಾತನ ಧರ್ಮವನ್ನು ಅಂತ್ಯಗೊಳಿಸುವ ಮಾತನಾಡುತ್ತಿದ್ದಾರೆ ಮತ್ತು ನಮ್ಮ ದೇಶದ ಸಂಸ್ಕೃತಿ ಮತ್ತು ಇತಿಹಾಸವನ್ನು ಅವಮಾನಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ರಾಜಸ್ಥಾನದ ಬೆನೇಶ್ವರ್ ಧಾಮ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು, ಕಾಂಗ್ರೆಸ್ ಮತ್ತ ಡಿಎಂಕೆ ವಿರುದ್ದ ವಾಗ್ದಾಳಿ ನಡೆಸಿದರು. ರಾಜಸ್ಥಾನದಲ್ಲಿ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿಯ ಎರಡನೇ ಪರಿವರ್ತನ ಸಂಕಲ್ಪ ಯಾತ್ರೆಯ ಆರಂಭಿಸಿದೆ.
ಡಿಎಂಕೆ ನಾಯಕನ ಹೇಳಿಕೆಯನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಾರ್ಟಿ (BJP) ಇಂಡಿಯಾ ಕೂಟ ವಿರುದ್ಧ ತನ್ನ ಕುಟು ವಾಗ್ದಾಳಿಯನ್ನು ಮುಂದುವರಿಸಿದೆ. ಜನಾಂಗೀಯ ಹತ್ಯೆಕ್ಕೆ ಕರೆ ನೀಡಲಾಗಿದೆ. ಹೀಗಿದ್ದೂ ತಾನು ನೀಡಿದ ಹೇಳಿಕೆಗಳಿಗೆ ಬದ್ಧ ಎಂದು ಉದಯನಿಧಿ ಹೇಳಿದ್ದಾರೆ. ಹಾಗಾಗಿ, ಸುಪ್ರೀಂ ಕೋರ್ಟ್ ಈ ಕುರಿತು ಗಮನ ಹರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು
ಹಿಂದೂಗಳ ವಿರುದ್ಧ ಪ್ರತಿಪಕ್ಷಗಳು ಈ ರೀತಿ ಮಾತನಾಡುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ದೇಶದ ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕು ಅಲ್ಪಸಂಖ್ಯಾತರಿಗೆ ಎಂದು ಹೇಳಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಸ್ಮರಿಸಿಕೊಂಡರು.
ಮೋದಿ ಅಧಿಕಾರಕ್ಕೆ ಬಂದರೆ ಸನಾತನ ಧರ್ಮ ಆಡಳಿತ ನಡೆಸಲಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನೂ ಶಾ ಅವರು ಇದೇ ವೇಳೆ ಉಲ್ಲೇಖಿಸಿದರು. ಸನಾತನ ಧರ್ಮವು ಜನರ ಹೃದಯದಲ್ಲಿದೆ. ಅದನ್ನು ಯಾರೂ ಅಳಿಸಲು ಸಾಧ್ಯವಿಲ್ಲ… ಮತ್ತು ಮೋದಿಯವರು ಸಂವಿಧಾನದ ಮೂಲಕ ದೇಶವನ್ನು ನಡೆಸುತ್ತಾರೆ ಎಂದು ಹೇಳಿದ್ದಾರೆ ಎಂದು ಅಮಿತ್ ಶಾ ಅವರು ಹೇಳಿದರು.
ಸಚಿವ ಉದಯನಿಧಿ ಹೇಳಿದ್ದೇನು?
ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಉದಯನಿಧಿ ಸ್ಟಾಲಿನ್ ಮಾತನಾಡಿದರು. “ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದರು.
“ಕೆಲವು ವಿಷಯಗಳನ್ನು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಒಳ್ಳೆಯದು. ನಾವು ಡೆಂಗ್ಯೂ, ಸೊಳ್ಳೆ, ಮಲೇರಿಯಾ ಅಥವಾ ಕೊರೊನಾದಂತಹ ಸೋಂಕನ್ನು ವಿರೋಧಿಸಬಾರದು. ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು” ಎಂದು ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ವಿರುದ್ಧ ಭಾಷಣ ಮಾಡಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.