Site icon Vistara News

Nina Singh: ಸಿಐಎಸ್‌ಎಫ್‌ಗೆ ಮೊದಲ ಮಹಿಳಾ ಮುಖ್ಯಸ್ಥೆ! ಖಡಕ್ ಅಧಿಕಾರಿ ನೀನಾ ಸಿಂಗ್ ನೇತೃತ್ವ

Central Industrial Security Force gets Nina Singh as its first woman chief

ನವದೆಹಲಿ: ದಿಲ್ಲಿ ಮೆಟ್ರೋ (Delhi Metro) ಸೇರಿದಂತೆ ದೇಶಾದ್ಯಂತ ಇರುವ ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ(Central Industrial Security Force – CISF)ಗೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಮುಖ್ಯಸ್ಥೆಯಾಗಿ ಆಗಮಿಸಿದ್ದಾರೆ. ರಾಜಸ್ಥಾನ ಕೆಡರ್‌ನ 1989 ಬ್ಯಾಚಿನ ಐಪಿಎಸ್ ಅಧಿಕಾರಿ ನೀನಾ ಸಿಂಗ್ (IPS Nina Singh) ಅವರು ಸಿಐಎಸ್‌ಎಫ್‌ನ ಪ್ರಧಾನ ನಿರ್ದೇಶಕಿಯಾಗಿ ನೇಮಕವಾಗಿದ್ದಾರೆ(Special DG of CISF). ಮುಂದಿನ ವರ್ಷ ಜುಲೈ 31ರಂದು ಅವರು ನಿವೃತ್ತರಾಗಲಿದ್ದು, ಅಲ್ಲಿಯವರೆಗೆ ಅವರೂ ಸಿಐಎಸ್‌ಎಫ್ ಡಿಜಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮುಖ್ಯಸ್ಥರಾಗಿದ್ದ ಅನೀಶ್ ದಯಾಳ್ ಸಿಂಗ್ ಅವರನ್ನು ಹೊಸ ನೇಮಕಾತಿಗಳ ಭಾಗವಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ನ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಬಿಹಾರ ಮೂಲದ ನೀನಾ ಸಿಂಗ್ ಅವರು ಪಾಟ್ನಾ ಮಹಿಳಾ ಕಾಲೇಜು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ರಾಜಸ್ಥಾನ ಪೊಲೀಸ್‌ನ ಅತ್ಯುನ್ನತ ಪದವಿ ನಿರ್ವಹಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಅವರಿಗಿದೆ. ರಾಜ್ಯ ಪೊಲೀಸ್ ಪಡೆಯಲ್ಲಿ ಆರು ಅಧಿಕಾರಿಗಳು ಮಹಾ ನಿರ್ದೇಶಕರ ಶ್ರೇಣಿಯಲ್ಲಿದ್ದಾರೆ.

2000ರಲ್ಲಿ ರಾಜ್ಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ, ಅವರು ಆಯೋಗದ ಸದಸ್ಯರು ಸಂಕಷ್ಟದಲ್ಲಿರುವ ಮಹಿಳೆಯರಿಗೆ ವಿಚಾರಣೆ ನಡೆಸಲು ಜಿಲ್ಲೆಗಳಿಗೆ ತೆರಳುವ ಕಾರ್ಯಕ್ರಮವನ್ನು ರೂಪಿಸಿದ್ದರು. ಅವರು ನೊಬೆಲ್ ಪ್ರಶಸ್ತಿ ವಿಜೇತರಾದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೋ ಅವರೊಂದಿಗೆ ಎರಡು ಸಂಶೋಧನಾ ಪ್ರಬಂಧಗಳನ್ನು ಕೂಡ ಬರೆದಿದ್ದಾರೆ. 2005-2006 ರಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಾಗಿ ಪೊಲೀಸ್ ಠಾಣೆಗಳನ್ನು ಹೆಚ್ಚು ಸಮೀಪಿಸಲು ಒಂದು ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ.

2013-2018ರ ಅವಧಿಯಲ್ಲಿ ಅವರು ಸಿಬಿಐನ ಜಂಟಿ ನಿರ್ದೇಶಕರಾಗಿದ್ದಾಗ, ಶೀನಾ ಬೋರಾ ಹತ್ಯೆ ಪ್ರಕರಣ ಮತ್ತು ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಂತಹ ಹೈ ಪ್ರೊಫೈಲ್ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಿದರು. 2020ರಲ್ಲಿ ಅವರು ವೃತ್ತಿಪರ ಶ್ರೇಷ್ಠತೆಗಾಗಿ ಅತಿ ಉತ್ಕೃಷ್ಟ ಸೇವಾ ಪದಕವನ್ನು ಪಡೆದರು. ಇವರ ಪತಿ ರೋಹಿತ್ ಕುಮಾರ್ ಸಿಂಗ್ ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದು, ಪ್ರಸ್ತುತ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Parliament: ಸಂಸತ್ ಭದ್ರತೆ ಹೊಣೆ ಸಿಐಎಸ್‌ಎಫ್‌ಗೆ! ಇನ್ನು ನೊಣ ಕೂಡ ನುಸುಳಲು ಆಗಲ್ಲ!

Exit mobile version