Site icon Vistara News

monsoon parliament session: ಮಣಿಪುರ ಹಿಂಸಾಚಾರ ಚರ್ಚೆಗೆ ‘ಮಧ್ಯದ ದಾರಿ’ ಕಂಡುಕೊಂಡ ಸರ್ಕಾರ! ಷರತ್ತು ಅನ್ವಯ

Manipur High Court modifies its order to add Maitai community to ST list

ನವದೆಹಲಿ: ಮಣಿಪುರ ಹಿಂಸಾಚಾರ (Manipur Violence) ಕುರಿತು ಚರ್ಚೆಗೆ ಸಂಬಂಧಿಸಿದಂತೆ ಈವರೆಗೆ ಸಂಸತ್‌ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ತೀವ್ರ ಸಂಘರ್ಷ ಏರ್ಪಟ್ಟಿತ್ತು. ಮಳೆಗಾಲದ ಅಧಿವೇಶನ (monsoon parliament session) ಶುರುವಾಗಿ ಎರಡು ವಾರಗಳಾದರೂ ಒಂದು ದಿನವೂ ಕಲಾಪ ಸುಗಮವಾಗಿ ನಡೆದಿಲ್ಲ. ಈ ಬಿಕ್ಕಟ್ಟು ಶಮನಕ್ಕೆ ಪ್ರತಿಪಕ್ಷಗಳು (opposition parties) ಮತ್ತು ಆಡಳಿತ ಪಕ್ಷಗಳ (Central Government) ಮಧ್ಯದ ದಾರಿಯೊಂದನ್ನು ಹುಡುಕೊಂಡಿವೆ ಎನ್ನಲಾಗಿದೆ. ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಒಪ್ಪಿಕೊಂಡಿದೆಯಾದರೂ, ಅದು ವಿಧಿಸಿರುವ ಷರತ್ತಿಗೆ ಪ್ರತಿಪಕ್ಷಗಳು ಒಪ್ಪಿಕೊಂಡಿಲ್ಲ. ಹಾಗಾಗಿ ತಕ್ಷಣಕ್ಕೆ ಈ ಬಿಕ್ಕಟ್ಟು ಶಮನವಾಗುತ್ತದೆ ಎಂದೂ ನಿರೀಕ್ಷಿಸಬೇಕಾಗಿಲ್ಲ.

ಮಣಿಪುರ ಹಿಂಸಾಚಾರವನ್ನು ಸದನದ ರೂಲ್ 276ರ ಅಡಿ ಚರ್ಚೆ ಮಾಡಬೇಕು ಎಂಬುದು ಪ್ರತಿಪಕ್ಷಗಳ ಬೇಡಿಕೆ. ಆದರೆ, ಇದಕ್ಕೆ ಒಪ್ಪದ ಆಡಳಿತ ಪಕ್ಷವು 176ರ ಅಡಿ ಚರ್ಚೆಗೆ ಸಿದ್ದ ಎಂದು ಹೇಳುತ್ತಿದೆ. ಈಗ ಮಧ್ಯದ ದಾರಿಯನ್ನು ಸೂಚಿಸಿರುವ ಸರ್ಕಾರ ನಮಗೂ ಬೇಡ, ನಿಮಗೂ ಬೇಡ ಎನ್ನುವಂತೆ ರೂಲ್ 167ರ ಅಡಿ ಚರ್ಚೆಗೆ ಒಪ್ಪಿದೆ. ರೂಲ್ 167ರಲ್ಲಿ ಚರ್ಚೆ ನಡೆಸಿ, ಸಂಬಂಧಿಸಿದ ಸಚಿವರಿಂದ ಪ್ರತಿಕ್ರಿಯೆ ಪಡೆಯಬೇಕಾಗುತ್ತದೆ ಮತ್ತು ವೋಟಿಂಗ್ ಒಳಗೊಂಡಿರುತ್ತದೆ. ಇದಕ್ಕೆ ಬೇಕಾದ ಸಮಯವನ್ನು ಸ್ಪೀಕರ್ ನಿಗದಿ ಮಾಡಬೇಕಾಗುತ್ತದೆ.

ಮೂಲಗಳ ಪ್ರಕಾರ, ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರ ಕುರಿತು ಚರ್ಚಿಸಲು ಕೇಂದ್ರ ಸರ್ಕಾರವು ಆಗಸ್ಟ್ 11 ರಂದು ಸಮಯ ನೀಡಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷಗಳು ಒಪ್ಪಿಕೊಂಡಿಲ್ಲ. ಯಾಕೆಂದರೆ, ಅಂದೇ ಮಳೆಗಾಲದ ಅಧಿವೇಶನದ ಕೊನೆಯ ದಿನವಾಗಿದೆ! ಹಾಗಾಗಿ, ಆಗಸ್ಟ್ 11ರಂದು ಚರ್ಚಿಸಲು ಪ್ರತಿಪಕ್ಷಗಳ ಚರ್ಚಿಸಲು ಬಹುತೇಕ ಒಪ್ಪಿಗೆ ನೀಡುವುದಿಲ್ಲ.

ಆದರೆ, ಹಿಂಸಾಚಾರ ಪೀಡಿತ ರಾಜ್ಯದ ಕುರಿತು ಪ್ರಧಾನಿ ಸಂಸತ್ತಿನಲ್ಲಿ ಭಾಷಣ ಮಾಡಬೇಕೆಂಬ ಪ್ರತಿಪಕ್ಷಗಳ ದೊಡ್ಡ ಬೇಡಿಕೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆಗಸ್ಟ್ 10 ರಂದು ನಡೆಯಲಿರುವ ಅವಿಶ್ವಾಸ ನಿರ್ಣಯದ ಉತ್ತರದಲ್ಲಿ ಅವರು ಮಣಿಪುರದ ಬಗ್ಗೆ ಪ್ರತಿಕ್ರಿಯಿಸಬಹುದು ಎಂದು ಮೂಲಗಳು ಸೂಚಿಸಿವೆ. ಹಾಗಾಗಿ ಸರ್ಕಾರ ಸೂಚಿಸಿದಂತೆ ಆಗಸ್ಟ್ 11 ರಂದು ಪ್ರತಿಪಕ್ಷಗಳು ಚರ್ಚೆಗೆ ಒಪ್ಪಿದರೆ, ಆಗ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಮಾತನಾಡಬೇಕಾತ್ತಿತ್ತು.

ಈ ಸುದ್ದಿಯನ್ನೂ ಓದಿ: Parliament Monsoon Session: ಸಂಸತ್ ಕಲಾಪದ ಪ್ರತಿ ನಿಮಿಷಕ್ಕೆ 2.5 ಲಕ್ಷ ರೂ. ವೆಚ್ಚ!

ಈಗಾಗಲೇ ಸಂಸತ್ ಕಲಾಪದ ಮುಂದಿನ ವಾರದ ವೇಳಾಪಟ್ಟಿಯನ್ನು ಒದಗಿಸಲಾಗಿದೆ. ಅದರಂತೆ, ಸೋಮವಾರ ದಿಲ್ಲಿ ಸರ್ವೀಸ್ ಬಿಲ್, ಮಂಗಳವಾರ, ಬುಧವಾರ ಮತ್ತು ಗುರುವಾರ ಅವಿಶ್ವಾಸ ನಿರ್ಣಯ ಚರ್ಚೆ ನಡೆಯಲಿದೆ. ಹಾಗಾಗಿ, ಮಣಿಪುರ ಹಿಂಸಾಚಾರ ಕುರಿತು ಚರ್ಚಿಸಲು ತುಂಬಾ ಸಮಯವೇನೂ ಉಳಿಯುವುದಿಲ್ಲ ಎನ್ನಲಾಗುತ್ತಿದೆ. ಹಾಗಾಗಿ, ಆಗಸ್ಟ್ 11ರಂದು ಚರ್ಚೆ ನಡೆಸಬೇಕು ಇಲ್ಲವೇ ಮಳೆಗಾಲದ ಅಧಿವೇಶನವನ್ನು ವಿಸ್ತರಣೆ ಮಾಡಬೇಕೆಂಬುದು ಈಗ ಸರ್ಕಾರದ ಮುಂದಿರುವ ಸವಾಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version