ನವ ದೆಹಲಿ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬಾಂಗ್ಲಾದೇಶದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ವೈದ್ಯಕೀಯ ವಿದ್ಯಾರ್ಥಿಯನ್ನು ವಿಶೇಷ ಚಿಕಿತ್ಸೆಗಾಗಿ ನವ ದೆಹಲಿಯ ಏಮ್ಸ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಂಡಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ತಿಳಿಸಿದ್ದಾರೆ.
ಜಮ್ಮುವಿನ ರಜೌರಿ ಜಿಲ್ಲೆಯ ನಿವಾಸಿಯಾದ ಶೋಯೆಬ್ ಲೋನ್ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಬರಿಂದ್ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು. ಜೂನ್ 3ರಂದು ಶೋಯೆಬ್, ಕಾಲೇಜಿನ ಇತರ ಇಬ್ಬರು ಸ್ನೇಹಿತರೊಂದಿಗೆ ಹೊರಗಡೆ ಹೋಗಿದ್ದಾಗ ಕಾರು ಅಪಘಾತವಾಗಿತ್ತು. ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನು ಓದಿ| GOOD NEWS: ರೆಸ್ಟೊರೆಂಟ್‌ಗಳಲ್ಲಿ ಸೇವಾ ಶುಲ್ಕ ರದ್ದುಪಡಿಸಲು ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ಕಾನೂನು ಜಾರಿ
ಈ ಘಟನೆ ಬಳಿಕ ರಜೌರಿಗೆ ಭೇಟಿ ನೀಡಿದ್ದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಶೋಯೆಬ್ ತಂದೆಯನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರ ತಂದೆ ತಮ್ಮ ಮಗನ ಚಿಕಿತ್ಸೆಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈ ಕುರಿತು ರವೀಂದ್ರ ಅವರು ಪ್ರಧಾನಮಂತ್ರಿ ಕಚೇರಿಯ ಸಹಾಯವನ್ನು ಕೇಳಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಮಂತ್ರಿ ಕಚೇರಿ, ವಿದ್ಯಾರ್ಥಿಯನ್ನು ಏರ್ ಲಿಫ್ಟ್ ಮಾಡಿಸಿ ಏಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದೆ.
ಗಾಯಾಳು ಮಗನನ್ನು ಕೇಂದ್ರ ಸರ್ಕಾರ ಬಾಂಗ್ಲಾದೇಶದಿಂದ ವಿಮಾನದ ಮೂಲಕ ಭಾರತಕ್ಕೆ ಏರ್ ಲಿಫ್ಟ್ ಮಾಡಿಸಿ ಏಮ್ಸ್‌ನಲ್ಲಿ ಚಿಕಿತ್ಸೆ ನೀಡುತ್ತಿರುವುದಕ್ಕೆ ಶೋಯೇಬ್‌ನ ತಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಕೂಡ ವಿದ್ಯಾರ್ಥಿಯ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡುವಂತೆ ಬಾಂಗ್ಲಾದೇಶದ ಭಾರತದ ರಾಯಭಾರಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ವಿದ್ಯಾರ್ಥಿಯ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ| ದೇಶದ್ರೋಹ ಕಾಯ್ದೆ ಮರುಪರಿಶೀಲನೆ: ಉತ್ತರಿಸಲು ಕೇಂದ್ರ ಸರ್ಕಾರಕ್ಕೆ 24 ಗಂಟೆ ಗಡುವು ನೀಡಿದ ಸುಪ್ರೀಂ ಕೋರ್ಟ್