ನವದೆಹಲಿ: ಆನ್‌ಲೈನ್ ಯುಗದಲ್ಲಿ ನಕಲಿ ಸುದ್ದಿಗಳ ಹಾವಳಿ ಜಾಸ್ತಿಯಾಗಿದೆ. ಅದರಲ್ಲೂ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಯನ್ನು ಹರಡುವುದು, ತಪ್ಪು ಮಾಹಿತಿ ನೀಡುವುದು ಹೇರಳವಾಗಿ ನಡೆಯುತ್ತಿದೆ. ಹೀಗೆ, ನಕಲಿ ಸುದ್ದಿಗಳ ಹಾವಳಿಯನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರವು ನೂತನ ಫ್ಯಾಕ್ಟ್ ಚೆಕ್ ವಿಭಾಗವನ್ನು (Fact Check Body) ಘೋಷಿಸಿದೆ.
“ನಕಲಿ ಸುದ್ದಿಗಳನ್ನು ತಡೆಯಲು ಕೇಂದ್ರ ಸರ್ಕಾರವು ಫ್ಯಾಕ್ಟ್ ಚೆಕ್ ವಿಭಾಗವನ್ನು ಸ್ಥಾಪಿಸಲು ತೀರ್ಮಾನಿಸಿದೆ. ಸರ್ಕಾರಕ್ಕೆ ಸಂಬಂಧಿಸಿದ ಆನ್‌ಲೈನ್ ಸುದ್ದಿಗಳನ್ನು ಎಲ್ಲ ವಿಭಾಗಗಳಲ್ಲಿ ಪರಿಶೀಲಿಸಲು, ಅವುಗಳ ಸತ್ಯಾಂಶವನ್ನು ಗಮನಿಸಲು ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಜನರಿಗೆ ಸರ್ಕಾರದ ಕುರಿತು ನಕಲಿ ಸುದ್ದಿಗಳನ್ನು ಹರಡುವ, ತಪ್ಪು ಮಾಹಿತಿ ನೀಡುವುದನ್ನು ತಪ್ಪಿಸಲಾಗುತ್ತದೆ” ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಮಾಹಿತಿ ನೀಡಿದರು. ಇದಕ್ಕಾಗಿ ಕೇಂದ್ರ ಸರ್ಕಾರವು 2021ರ ಮಾಹಿತಿ ತಂತ್ರಜ್ಞಾನ ಕಾಯ್ದೆ ನಿಯಮಗಳನ್ನು ಬದಲಿಸಿದೆ.
ಫ್ಯಾಕ್ಟ್ ಚೆಕ್ ಘಟಕದ ಕಾರ್ಯನಿರ್ವಹಣೆ ಹೇಗೆ?
ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಲು, ನಿಯಂತ್ರಿಸಲು ಕೇಂದ್ರ ಸರ್ಕಾರವು ಒಂದು ತಂಡವನ್ನು ರಚಿಸುತ್ತದೆ. ವಿಭಾಗದಲ್ಲಿ ಸಂಪೂರ್ಣವಾಗಿ ಕೇಂದ್ರ ಸರ್ಕಾರಿ ಅಧಿಕಾರಿಗಳೇ ಇರಲಿದ್ದಾರೆ. ಇವರು ಆನ್‌ಲೈನ್ ಮೂಲಕ ಹರಡುವ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಿ, ಡಿಜಿಟಲ್ ಮೂಲಕ ಪ್ರಕಟಿಸಿದ ಸುದ್ದಿಗಳನ್ನು ಗುರುತಿಸಿ, ಆ ಸುದ್ದಿಗಳನ್ನು ತೆಗೆಯುವಂತೆ ಆಯಾ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಸುದ್ದಿಗಳನ್ನು ತೆಗೆಯಲು ಮೂರು ತಿಂಗಳ ಅವಕಾಶ ನೀಡಲಾಗುತ್ತದೆ. ಇದಾದ ಬಳಿಕವೂ ನಕಲಿ ಸುದ್ದಿ ತೆಗೆಯದಿದ್ದರೆ ಐಟಿ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಹೊಸ ನಿಯಮಗಳ ಕುರಿತು ಸಚಿವ ಮಾಹಿತಿ
ಅಲ್ಲದೆ, ಇಂತಹ ಸುದ್ದಿಗಳನ್ನು ಡಿಲೀಟ್ ಮಾಡುವಂತೆ ಫೇಸ್‌ಬುಕ್, ಟ್ವಿಟರ್, ಯುಟ್ಯೂಬ್ ಸೇರಿ ಎಲ್ಲ ಸಾಮಾಜಿಕ ಜಾಲತಾಣಗಳಿಗೆ ಸೂಚಿಸಲಾಗುತ್ತದೆ. ಸುದ್ದಿ ಪ್ರಕಟವಾದ ಯುಆರ್‌ಎಲ್ (URL)ಅನ್ನು ಬ್ಲಾಕ್ ಮಾಡುವಂತೆ ಇಂಟರ್‌ನೆಟ್ ಪ್ರೊವೈಡರ್‌ಗಳಿಗೆ ಸೂಚಿಸಲಾಗುತ್ತದೆ. ಆದರೆ, ಫ್ಯಾಕ್ಟ್ ಚೆಕ್ ವಿಭಾಗದಲ್ಲಿ ಯಾವ ಇಲಾಖೆಯ ಅಧಿಕಾರಿಗಳು ಇರುತ್ತಾರೆ, ಯಾವ ಹಂತದ ಅಧಿಕಾರಿಗಳು ಇರಲಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈಗಾಗಲೇ ಕೇಂದ್ರ ಸರ್ಕಾರ ಪಿಐಬಿ ವೇದಿಕೆ ಮೂಲಕ ನಕಲಿ ಸುದ್ದಿಗಳನ್ನು ಪತ್ತೆಹಚ್ಚಲಾಗುತ್ತಿತ್ತು. ಅವುಗಳನ್ನು ಫ್ಯಾಕ್ಟ್ ಚೆಕ್ ಮಾಡಿ ಜನರಿಗೆ ಮಾಹಿತಿ ನೀಡಲಾಗುತ್ತಿತ್ತು. ಹಾಗೆಯೇ, ಪಿಐಬಿಯು ಅಂತಹ ಸುದ್ದಿಗಳನ್ನು ಡಿಲೀಟ್ ಮಾಡುವಂತೆ ಜಾಲತಾಣಗಳಿಗೆ ನಿರ್ದೇಶನ ನೀಡಬಹುದಿತ್ತು. ಆದರೆ, ಈ ನಿರ್ಧಾರವನ್ನು ನಾಗರಿಕ ಹಕ್ಕುಗಳ ಹೋರಾಟಗಾರರು, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ನ್ಯೂಸ್ ಬ್ರಾಡ್‌ಕಾಸ್ಟರ್ಸ್ & ಡಿಜಿಟಲ್ ಅಸೋಸಿಯೇಷನ್ ಸೇರಿ ಹಲವರು ವಿರೋಧಿಸಿದ್ದರು.