ನವದೆಹಲಿ: ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ, ನಕಲಿ ಸುದ್ದಿಗಳನ್ನು ಹರಡಿಸುವ ಆ್ಯಪ್ ಹಾಗೂ ಯುಟ್ಯೂಬ್ ಚಾನೆಲ್‌ಗಳ ವಿರುದ್ಧ ಕೇಂದ್ರ ಸರ್ಕಾರ ಸಮರ ಮುಂದುವರಿಸಿದೆ. ಇದಕ್ಕೆ ನಿದರ್ಶನ ಎಂಬಂತೆ, ಪ್ರತ್ಯೇಕ ಖಲಿಸ್ತಾನ ರಾಷ್ಟ್ರದ ಪರ ನಿಲುವು ಹೊಂದಿರುವ, ಖಲಿಸ್ತಾನ ಪರ ಭಾವನೆಗಳನ್ನು ಉತ್ತೇಜಿಸುವ ಅಂಶಗಳಿರುವ 8 ಯುಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ.
“ಖಲಿಸ್ತಾನ ಪರ ನಿಲುವು ಹೊಂದಿರುವ, ಖಲಿಸ್ತಾನ ಪರ ಉತ್ತೇಜನ ನೀಡುತ್ತಿರುವ ವಿದೇಶದ 6-8 ಯುಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಕಳೆದ 10 ದಿನದಲ್ಲಿ ಬ್ಲಾಕ್ ಮಾಡಿದೆ. ಪಂಜಾಬಿ ಭಾಷೆಯಲ್ಲಿ ಯುಟ್ಯೂಬ್ ಚಾನೆಲ್‌ಗಳ ಕಂಟೆಂಟ್ ಇದೆ. ಇದರಿಂದ ಪಂಜಾಬ್‌ನಲ್ಲಿ ಗಲಾಟೆ, ಗದ್ದಲ ಸೃಷ್ಟಿಗೆ ಯತ್ನಿಸಲಾಗುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ” ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ಕಾರ್ಯದರ್ಶಿ ಅಪೂರ್ವ ಚಂದ್ರ ಮಾಹಿತಿ ನೀಡಿದರು.
“ಕೇಂದ್ರ ಸರ್ಕಾರವು ಯುಟ್ಯೂಬ್ ಚಾನೆಲ್‌ಗಳನ್ನು 48 ಗಂಟೆಯಲ್ಲಿ ನಿರ್ಬಂಧಿಸಬೇಕು ಎಂದು ಸೂಚಿಸಿದ ಕಾರಣ ಯುಟ್ಯೂಬ್ ಸಂಸ್ಥೆಯು ಚಾನೆಲ್‌ಗಳನ್ನು ನಿರ್ಬಂಧಿಸಿದೆ. ಹಾಗೆಯೇ, ಆಕ್ಷೇಪಾರ್ಹ ವಿಚಾರಗಳುಳ್ಳ ಚಾನೆಲ್‌ಗಳನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ತಕ್ಷಣ ಬ್ಲಾಕ್ ಮಾಡುವ ವ್ಯವಸ್ಥೆ ಜಾರಿಗೆ ತನ್ನಿ” ಎಂಬುದಾಗಿ ಸರ್ಕಾರ ಯುಟ್ಯೂಬ್‌ಗೆ ಕೋರಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.
ಇದನ್ನೂ ಓದಿ: 45 Videos Blocked | ಅಗ್ನಿಪಥ ಕುರಿತು ಸುಳ್ಳು ಮಾಹಿತಿ, ಯುಟ್ಯೂಬ್‌ನ 45 ವಿಡಿಯೊ ಬ್ಲಾಕ್ ಮಾಡಿದ ಕೇಂದ್ರ