ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಬಿಬಿಸಿ ಆಕ್ಷೇಪಾರ್ಹವಾಗಿ ಚಿತ್ರಿಸಿದ ಇಂಡಿಯಾ: ದಿ ಮೋದಿ ಕ್ವಶ್ಚನ್ (India: The Modi Question) ಬಗ್ಗೆ ಬ್ರಿಟನ್‌ನಲ್ಲಿಯೇ ಆಕ್ರೋಶ ವ್ಯಕ್ತವಾಗುತ್ತಿದೆ. ಬ್ರಿಟನ್ ಪ್ರಧಾನಿ, ಸಂಸದರಿಂದ ಹಿಡಿದು ಎಲ್ಲರೂ ಬಿಬಿಸಿ ಡಾಕ್ಯುಮೆಂಟರಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಡಾಕ್ಯುಮೆಂಟರಿ ಕುರಿತ ಎಲ್ಲ ಲಿಂಕ್, ಪೋಸ್ಟ್ ಹಾಗೂ ವಿಡಿಯೊಗಳನ್ನು ಡಿಲೀಟ್ ಮಾಡಬೇಕು ಎಂದು ಟ್ವಿಟರ್ ಹಾಗೂ ಯುಟ್ಯೂಬ್‌ಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.
“ಕೇಂದ್ರ ಮಾಹಿತಿ ಹಾಗೂ ಪ್ರಸಾರ (I&B) ಸಚಿವಾಲಯವು ಎರಡೂ ಸೋಷಿಯಲ್ ಮೀಡಿಯಾಗಳಿಗೆ ಸೂಚನೆ ನೀಡಿದೆ. ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಪೋಸ್ಟ್ ಮಾಡಲಾದ ಲಿಂಕ್, ಪೋಸ್ಟ್, ವಿಡಿಯೊಗಳನ್ನು ಕೂಡಲೇ ಡಿಲೀಟ್ ಮಾಡಬೇಕು ಎಂಬುದಾಗಿ ಸೂಚಿಸಿದೆ” ಎಂದು ಉನ್ನತ ಮೂಲಗಳು ತಿಳಿಸಿವೆ. 2021ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಲಿಂಕ್, ಪೋಸ್ಟ್, ವಿಡಿಯೊಗಳನ್ನು ಡಿಲೀಟ್ ಮಾಡಲು ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ.
ಡಾಕ್ಯುಮೆಂಟರಿಯು ದುರುದ್ದೇಶಪೂರಕ ಎಂದು ಈಗಾಗಲೇ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಯುಟ್ಯೂಬ್‌ನಿಂದ ಡಾಕ್ಯುಮೆಂಟರಿಯನ್ನು ಈಗಾಗಲೇ ಡಿಲೀಟ್ ಮಾಡಲಾಗಿದೆ. ಭಾರತದಲ್ಲೂ ನಿವೃತ್ತ ನ್ಯಾಯಮೂರ್ತಿಗಳು, ರಾಯಭಾರಿಗಳು ಸೇರಿ ನೂರಾರು ಗಣ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ‘2002ರ ಗೋದ್ರಾ ಹತ್ಯಾಕಾಂಡಕ್ಕೆ ನರೇಂದ್ರ ಮೋದಿ ಅವರೇ ಕಾರಣ’ ಎಂದು ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ಖಂಡನೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ | BBC Documentary On Modi | ಮೋದಿ ಕುರಿತ ಡಾಕ್ಯುಮೆಂಟರಿ ಏಕಪಕ್ಷೀಯ, ಬ್ರಿಟನ್ ಸಂಸದ ಆಕ್ರೋಶ, ಬಿಬಿಸಿಗೆ ಪತ್ರ