ನವ ದೆಹಲಿ: ನಾಗಾಲ್ಯಾಂಡ್ನಲ್ಲಿ 2021ರ ಡಿಸೆಂಬರ್ 5ರಂದು 13 ನಾಗರಿಕರನ್ನು ಹತ್ಯೆಗೈದಿದ್ದ (Nagaland killings) 30 ಭಾರತೀಯ ಸೇನೆ ಸೈನಿಕರನ್ನು (Indian Army) ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಅಂದು ಒಂದಷ್ಟು ಕಾರ್ಮಿಕರು ಟಿರು ಎಂಬಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮುಗಿಸಿ ವಾಪಸ್ ಓಟಿಂಗ್ ಹಳ್ಳಿಯಲ್ಲಿರುವ ತಮ್ಮ ಪಿಕಪ್ ಟ್ರಕ್ನಲ್ಲಿ ಮನೆಗೆ ತೆರಳುತ್ತಿದ್ದರು. ಈ ಟ್ರಕ್ನ್ನು ತಪಾಸಣೆಗೆ ಒಳಪಡಿಸದ ಸೈನಿಕರು, ಅದರಲ್ಲಿದ್ದವರು ಬಂಡುಕೋರರು ಎಂದು ಭಾವಿಸಿ ಗುಂಡು ಹಾರಿಸಿದ್ದರು. ಈ ವೇಳೆ ಆರು ಮಂದಿ ನಾಗರಿಕರು ಅಲ್ಲೇ ಸಾವನ್ನಪ್ಪಿದ್ದರು. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಬಳಿಕ ಆ ನಾಗರಿಕರ ಶವವನ್ನು ಅವರ ಓಟಿಂಗ್ ಗ್ರಾಮಕ್ಕೆ ತಂದಾಗ ಹಳ್ಳಿಗರು ಸೇನೆ ವಿರುದ್ಧ ತಿರುಗಿಬಿದ್ದರು. ಪರಿಣಾಮ ದೊಡ್ಡಮಟ್ಟಿಗಿನ ಹಿಂಸಾಚಾರ ಭುಗಿಲೆದ್ದಿತ್ತು. ಈ ಗಲಭೆಯಲ್ಲಿ ಸೈನಿಕರ ಗುಂಡೇಟಿಗೆ ಮತ್ತೆ 7 ಮಂದಿ ನಾಗರಿಕರು ಬಲಿಯಾಗಿದ್ದರು. ಒಬ್ಬ ಭದ್ರತಾ ಸಿಬ್ಬಂದಿ ಕೂಡ ಜೀವ ಬಿಟ್ಟಿದ್ದ. ಹೀಗೆ ನಾಗರಿಕರ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಸೇನೆಯ 21 ಪ್ಯಾರಾ ಸ್ಪೆಶಲ್ ಯುನಿಟ್ನ 30 ಸೈನಿಕರ ಹೆಸರು ಕೇಳಿಬಂದಿತ್ತು. ಅವರಿಗೆ ಶಿಕ್ಷೆಯಾಗಬೇಕು ಎಂದು ಅನೇಕರು ಆಗ್ರಹಿಸಿದ್ದರು.
ನಾಗಾಲ್ಯಾಂಡ್ ಪೊಲೀಸರು ಮೊದಲು ಪ್ರಕರಣ ದಾಖಲು ಮಾಡಿಕೊಂಡಿದ್ದರು. ನಾಗಾಲ್ಯಾಂಡ್ ನುಸುಳುಕೋರರು ಎಂದುಕೊಂಡು ತಾವು ಫೈರಿಂಗ್ ಮಾಡಿದ್ದಾಗಿ ಸೇನಾ ಸಿಬ್ಬಂದಿ ಹೇಳಿದ್ದರು. ಅದಾದ ಮೇಲೆ ನಾಗರಿಕರ ಹತ್ಯೆ ಕೇಸ್ನ ತನಿಖೆಗಾಗಿ ವಿಶೇಷ ತನಿಖಾ ತಂಡ (SIT)ವನ್ನು ರಚಿಸಲಾಯಿತು. ಸಂಪೂರ್ಣ ತನಿಖೆ ನಡೆಸಿದ ಎಸ್ಐಟಿ 2022ರ ಮಾರ್ಚ್ 24ರಂದು ತನ್ನ ವರದಿಯನ್ನು ಕೊಟ್ಟಿತ್ತು. 2022ರ ಮೇ 30ರಂದು ನಾಗಾಲ್ಯಾಂಡ್‌ನ ಮಾನ್ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿತ್ತು.
ಇದನ್ನೂ ಓದಿ: Nagaland’s Oldest Person : ನಾಗಾಲ್ಯಾಂಡ್‌ನ ಅತ್ಯಂತ ಹಿರಿಯ ನಿವಾಸಿ, 121 ವರ್ಷದ ಪುಪಿರೆಯ್ ಪ್ಫುಖಾ ನಿಧನ
ಸೆಷನ್ಸ್ ಕೋರ್ಟ್ ಇದರ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಮೊದಲೇ ಆರೋಪಿ ಸ್ಥಾನದಲ್ಲಿದ್ದ ಸೈನಿಕರ ಪತ್ನಿಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಕೇಸ್ನ ವಿಚಾರಣೆಗೆ ತಡೆ ನೀಡುವಂತೆ ಮನವಿ ನೀಡಿದ್ದರು. ಹಾಗೇ, 2022ರ ಜುಲೈ 19ರಂದು ಸುಪ್ರೀಂಕೋರ್ಟ್ ಕೂಡ ಸೆಷನ್ಸ್ ಕೋರ್ಟ್ ಈ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಕ್ಕೆ ಮಧ್ಯಂತರ ತಡೆ ನೀಡಿತ್ತು. ಹಾಗಾಗಿ ಕೇಸ್ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇದೆ. ಆ 30 ಸೈನಿಕರನ್ನು ಪೊಲೀಸ್ ವಿಚಾರಣೆ ನಡೆಸಲು ಕೇಂದ್ರ ಮಿಲಿಟರಿ ವ್ಯವಹಾರಗಳ ಸಚಿವಾಲಯ, ಕೇಂದ್ರ ಗೃಹ ಇಲಾಖೆಗಳು ಅನುಮತಿ ನೀಡುತ್ತಿಲ್ಲ ಎಂದು ನಾಗಾಲ್ಯಾಂಡ್ ಪೊಲೀಸ್ ಇಲಾಖೆ ತಿಳಿಸಿದೆ.