ನವದೆಹಲಿ: ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು (Central Government) ಬಂಪರ್ ಕೊಡುಗೆ ನೀಡಿದೆ. ದೇಶಾದ್ಯಂತ ಉಜ್ವಲ ಯೋಜನೆ ಫಲಾನುಭವಿಗಳಿಗೆ 14.2 ಕೆ.ಜಿಯ ಪ್ರತಿ ಸಿಲಿಂಡರ್‌ಗೆ 200 ಸಬ್ಸಿಡಿ (LPG Subsidy) ನೀಡಲು ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಮತ್ತೊಂದು ವರ್ಷದ ಅವಧಿಗೆ ದೇಶದ ಕೋಟ್ಯಂತರ ಜನರು ಸಬ್ಸಿಡಿಯ ಲಾಭ ಪಡೆಯಲಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಉಜ್ವಲ ಯೋಜನೆಯ ಫಲಾನುಭವಿಗಳು ಒಂದು ವರ್ಷದಲ್ಲಿ ಖರೀದಿಸುವ ಗರಿಷ್ಠ 12 ಸಿಲಿಂಡರ್‌ಗಳಿಗೆ ತಲಾ 200 ರೂಪಾಯಿ ಸಬ್ಸಿಡಿ ಸಿಗಲಿದೆ. ದೇಶದಲ್ಲಿ 9.59 ಕೋಟಿ ಉಜ್ವಲ ಫಲಾನುಭವಿಗಳಿದ್ದು, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ (DBT) ಅನ್ವಯ ನೇರವಾಗಿ ಫಲಾನುಭವಿಗಳ ಖಾತೆಗೆ ಸಬ್ಸಿಡಿ ಜಮೆಯಾಗಲಿದೆ. ಕೇಂದ್ರ ಸರ್ಕಾರದ ನಿರ್ಧಾರದಿಂದ 2023-24ನೇ ಸಾಲಿನಲ್ಲಿ 7,680 ಕೋಟಿ ರೂಪಾಯಿ ವ್ಯಯವಾಗಲಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್
ಈಗಾಗಲೇ 2022ರ ಮೇ 22ರಿಂದ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)ಗಳು ಸಬ್ಸಿಡಿಯನ್ನು ನೀಡುತ್ತಿವೆ. ಕೇಂದ್ರ ಸರ್ಕಾರವು ಸಬ್ಸಿಡಿಗಾಗಿ 2022-23ನೇ ಸಾಲಿನಲ್ಲಿ 6,100 ಕೋಟಿ ರೂಪಾಯಿ ವ್ಯಯಿಸಿದೆ.
ಕೇಂದ್ರ ಸರ್ಕಾರವು 2016ರ ಮೇ ತಿಂಗಳಲ್ಲಿ ಠೇವಣಿ ರಹಿತವಾಗಿ ಜನರಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸುವ ದಿಸೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಜಾರಿಗೆ ತಂದಿದೆ. ಅದರಲ್ಲೂ, ಗ್ರಾಮೀಣ ಭಾಗಗಳಲ್ಲಿ ಎಲ್‌ಪಿಜಿ ಬಳಕೆ ಉತ್ತೇಜನಕ್ಕಾಗಿ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆ ಅಡಿಯಲ್ಲಿ ಜನ ಯಾವುದೇ ಠೇವಣಿ ಇಲ್ಲದೆ ಮನೆಗೆ ಅಡುಗೆ ಅನಿಲ ಸಂಪರ್ಕ ಪಡೆಯಬಹುದಾಗಿದೆ. ದೇಶದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳ ಎಲ್‌ಪಿಜಿ ಬಳಕೆ ಶೇ.20ರಷ್ಟು ಏರಿಕೆಯಾಗಿದೆ.