Site icon Vistara News

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

CAA Certificate

Centre grants citizenship certificates under CAA to people from West Bengal

ಕೋಲ್ಕೊತಾ: “ಪಶ್ಚಿಮ ಬಂಗಾಳದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಬಿಡುವುದಿಲ್ಲ” ಎಂಬುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳುತ್ತಲೇ ಇದ್ದರು. “ಸಿಎಎ ಜಾರಿಯನ್ನು ತಡೆಯಲು ಯಾವುದೇ ರಾಜ್ಯಗಳಿಗೆ ಸಾಧ್ಯವಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಿರುಗೇಟು ನೀಡುತ್ತಲೇ ಇದ್ದರು. ಸಿಎಎ ಜಾರಿ ಕುರಿತು ದೀದಿ ಹಾಗೂ ಮೋದಿ ನಡುವೆ ಜಟಾಪಟಿ ನಡೆಯುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಗೊಳಿಸಿದೆ. ಹೌದು, ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಸಿಎಎ ಅಡಿಯಲ್ಲಿ ಕೇಂದ್ರ ಸರ್ಕಾರವು ಭಾರತದ ಪೌರತ್ವ (CAA Certificate) ಪ್ರದಾನ ಮಾಡಿದೆ.

ಸಿಎಎ ಪ್ರಮಾಣಪತ್ರ ನೀಡಿರುವ ಕುರಿತು ಕೇಂದ್ರ ಗೃಹ ಸಚಿವಾಲಯವು ಮಾಹಿತಿ ನೀಡಿದೆ. “ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ಉತ್ತರಾಖಂಡದಲ್ಲಿ ನೆಲೆಸಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ಪ್ರಮಾಣಪತ್ರ ನೀಡಲಾಗಿದೆ. ಅರ್ಜಿದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೌರತ್ವ ನೀಡಲಾಗಿದೆ” ಎಂಬುದಾಗಿ ತಿಳಿಸಿದೆ. ಇದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕೃತವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಂತಾಗಿದೆ.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರವು 14 ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗಿತ್ತು. ಪಾಕಿಸ್ತಾನದಿಂದ ಬಂದು, ದೆಹಲಿಯ ಆದರ್ಶ ನಗರದಲ್ಲಿ ವಾಸಿಸುತ್ತಿರುವ ಹಲವರಿಗೆ ಭಾರತದ ಪೌರತ್ವ ನೀಡಲಾಗಿತ್ತು. ಮಹಿಳೆಯರು ಹಾಗೂ ಮಕ್ಕಳು ಸೇರಿ ಹಲವರು ಭಾರತದ ಪೌರತ್ವ ಪ್ರಮಾಣಪತ್ರ ಹಿಡಿದಿರುವ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿದ್ದವು. ಪೌರತ್ವ ಪಡೆದವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದರು.

ಮಮತಾ ಬ್ಯಾನರ್ಜಿ ಏನು ಹೇಳಿದ್ದರು?

ಸಿಎಎ, ಏಕರೂಪ ನಾಗರಿಕ ಸಂಹಿತೆ ಹಾಗೂ ಎನ್‌ಆರ್‌ಸಿಯನ್ನು ವಿರೋಧಿಸುತ್ತಲೇ ಬಂದಿರುವ ಮಮತಾ ಬ್ಯಾನರ್ಜಿ ಅವರು ಹಲವು ಸಂದರ್ಭಗಳಲ್ಲಿ ಸಿಎಎ ಜಾರಿಯಾಗಲು ಬಿಡುವುದಿಲ್ಲ ಎಂದಿದ್ದರು. “ಪಶ್ಚಿಮ ಬಂಗಾಳದಲ್ಲಿ ಸಿಎಎ, ಎನ್‌ಆರ್‌ಸಿ ಜಾರಿಗೊಳಿಸಲು ಬಿಡುವುದಿಲ್ಲ. ಇದಕ್ಕಾಗಿ ನಾವು ರಕ್ತಪಾತಕ್ಕೂ ಸಿದ್ಧರಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಗಲಾಟೆ ಎಬ್ಬಿಸಲು ಸಿಎಎ ಸೇರಿ ಹಲವು ವಿಷಯಗಳನ್ನು ಮುನ್ನೆಲೆಗೆ ತರುತ್ತಾರೆ. ಆದರೆ, ಪಶ್ಚಿಮ ಬಂಗಾಳದವರಾದ ನಾವು ಒಗ್ಗಟ್ಟಿನಿಂದ ಇದ್ದರೆ ಸಿಎಎ ಜಾರಿಗೊಳಿಸಲು ಆಗುವುದಿಲ್ಲ” ಎಂದು ಹೇಳಿದ್ದರು.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019 ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Exit mobile version