ನವದೆಹಲಿ/ಡೆಹ್ರಾಡೂನ್: ಉತ್ತರಾಖಂಡದ ಜೋಶಿಮಠವನ್ನು (Joshimath Sinking) ಅಧಿಕೃತವಾಗಿಯೇ ‘ಮುಳುಗುತ್ತಿರುವ ಪಟ್ಟಣ’ ಎಂದು ಘೋಷಿಸಲಾಗಿದ್ದು, ಪಟ್ಟಣದ ಜನರನ್ನು ರಕ್ಷಿಸಲಾಗುತ್ತಿದೆ. ಹಾಗೆಯೇ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಭೆ ನಡೆಸಿದೆ. ಆದರೂ, ಪಟ್ಟಣದ ಜನ ಆತಂಕದಲ್ಲಿಯೇ ದಿನದೂಡುತ್ತಿದ್ದು, ಭಾನುವಾರದ ಪ್ರಮುಖ ಬೆಳವಣಿಗೆಗಳು ಇಲ್ಲಿವೆ.
ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಭೆ
ಜೋಶಿಮಠ ಪಟ್ಟಣದ ತುಂಬ ಬಿರುಕುಗಳೇ ಕಾಣಿಸಿಕೊಳ್ಳುತ್ತಿರುವುದು, ದೇವಾಲಯಗಳು ಕುಸಿಯುತ್ತಿರುವುದು ಹಾಗೂ ಕಟ್ಟಡಗಳು ಶಿಥಿಲವಾಗಿರುವುದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ಮುಖ್ಯ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಇಡೀ ಪಟ್ಟಣದ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಹಾಗೆಯೇ, ಮುಂದಿನ ತೀರ್ಮಾನಗಳ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ಅಧಿಕಾರಿಗಳ ತಂಡ ಭೇಟಿ
ಜೋಶಿಮಠ ಪಟ್ಟಣಕ್ಕೆ ಸೋಮವಾರ (ಜನವರಿ 9) ಕೇಂದ್ರದ ಉನ್ನತ ತಂಡ ಭೇಟಿ ನೀಡಲಿದೆ. ಗಡಿ ನಿರ್ವಹಣೆ ಕಾರ್ಯದರ್ಶಿ, ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಪ್ರತಿನಿಧಿಗಳು ಹಾಗೂ ತಜ್ಞರು ಭೇಟಿ ನೀಡಿ ಪಟ್ಟಣದ ಪರಿಸ್ಥಿತಿ ಕುರಿತು ಹೆಚ್ಚಿನ ಪರಿಶೀಲನೆ, ಅಧ್ಯಯನ ನಡೆಸಲಿದ್ದಾರೆ. ಸಣ್ಣ, ಮಧ್ಯಮ ಹಾಗೂ ಸುದೀರ್ಘ ಪರಿಹಾರದ ಕುರಿತು ಚಿಂತನೆ ನಡೆದಿದೆ. ಇದರ ಜಾರಿಗೆ ಅಧಿಕಾರಿಗಳ ಭೇಟಿಯು ಪ್ರಮುಖವಾಗಿದೆ ಎಂದು ತಿಳಿದುಬಂದಿದೆ.
ಮೋದಿ ಜತೆ ಸಿಎಂ ಧಾಮಿ ಮಾತುಕತೆ
ಜೋಶಿಮಠ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. “ಜೋಶಿಪಠ ಪರಿಸ್ಥಿತಿ, ಪರಿಹಾರ ಸೇರಿ ಹಲವು ವಿಷಯಗಳ ಕುರಿತು ಪ್ರಧಾನಿ ಅವರ ಜತೆ ಚರ್ಚಿಸಿದ್ದೇನೆ. ಸಕಲ ರೀತಿಯಲ್ಲಿ ನೆರವು ಒದಗಿಸುವುದಾಗಿ ಮೋದಿ ಅವರು ಭರವಸೆ ನೀಡಿದ್ದಾರೆ” ಎಂದು ಧಾಮಿ ತಿಳಿಸಿದ್ದಾರೆ.
ಮುಳುಗುತ್ತಿರುವ ಪಟ್ಟಣ ಎಂದು ಘೋಷಣೆ, 90 ಕುಟುಂಬಗಳ ಸ್ಥಳಾಂತರ
ಜೋಶಿಮಠವನ್ನು ಮುಳುಗುತ್ತಿರುವ ಪಟ್ಟಣ ಎಂಬುದಾಗಿ ಘೋಷಿಸಲಾಗಿದ್ದು, ಪಟ್ಟಣದಿಂದ ಭಾನುವಾರ 90 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಾಜ್ಯ ಸರ್ಕಾರವು ಪಟ್ಟಣದ ಎಲ್ಲ ಒಂಬತ್ತು ವಾರ್ಡ್‌ಗಳನ್ನು ವಿಪತ್ತು ಪೀಡಿತ ಪ್ರದೇಶಗಳು ಎಂದು ಘೋಷಿಸಿದೆ. ಹಾಗಾಗಿ, ಹೆಚ್ಚು ಅಪಾಯವಿರುವ ಪ್ರದೇಶಗಳಿಂದ ಜನರನ್ನು ಕ್ಷಿಪ್ರವಾಗಿ ಸ್ಥಳಾಂತರಿಸಲಾಗುತ್ತಿದೆ.
ಇದನ್ನೂ ಓದಿ | Joshimath Sinking | ಜೋಶಿಮಠ ಪಟ್ಟಣದ ತುಂಬ ಬಿರುಕು, ಇಲ್ಲಿವೆ ಭೀಕರ ಕತೆ ಹೇಳುವ ʼಛಿದ್ರ ಚಿತ್ರʼಗಳು