ನವದೆಹಲಿ: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ (Ram mandir) ಪ್ರತಿಷ್ಠಾಪನೆ ಕುರಿತು ತಪ್ಪು ಅಥವಾ ಸುಳ್ಳು ಮಾಹಿತಿ ಹರಡಿದ್ರೆ ಕೇಸ್ ದಾಖಲಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಕೋಮು ಸೌಹಾರ್ದತೆ ಅಥವಾ ಶಾಂತಿಗೆ ಭಂಗ ತರುವ ಯಾವುದೇ ವಿಷಯವನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡದಿರುವಂತೆ ಸುದ್ದಿ ಸಂಸ್ಥೆಗಳು, ಸೋಶಿಯಲ್ ಮೀಡಿಯಾ ಫ್ಲ್ಯಾಟ್ಫಾರ್ಮ್ಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (ಎಂಐಬಿ) ಕೆಲವೊಂದು ಸಲಹೆಗಳನ್ನು ನೀಡಿದೆ.
ಖಾತರಿಪಡಿಸದ, ಪ್ರಚೋದನಕಾರಿ ಮತ್ತು ನಕಲಿ ಸಂದೇಶಗಳನ್ನು ಈಗಾಗಲೇ ಹರಡಲಾಗುತ್ತಿದೆ. ಇವುಗಳು ಸಾಮಾಜಿಕ ಮಾಧ್ಯಮಗಳಲ್ಲಿ, ಇದು ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಬಹುದು. ಹೀಗಾಗಿ ಅಂಥ ಸಂಗತಿಗಳನ್ನು ಪ್ರಕಟಿಸಿದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಅಯೋಧ್ಯೆಯ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನೆ 2024 ರ ಜನವರಿ 22 ರಂದು ನಡೆಯಲಿದೆ. ಅಂದು ಭಾರತದಾದ್ಯಂತ ಸಂಭ್ರಮಾಚರಣೆ ನಡೆಯಲಿದೆ. ಈ ಬಗ್ಗೆ ಕೆಲವು ಪರಿಶೀಲಿಸದ, ಪ್ರಚೋದನಕಾರಿ ಮತ್ತು ನಕಲಿ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿದೆ. ಇದು ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಬಹುದು ಎಂದು ಶುಕ್ರವಾರ ಬಿಡುಗಡೆ ಮಾಡಿದ ಸಲಹೆಯಲ್ಲಿ ತಿಳಿಸಲಾಗಿದೆ.
ದೇಶದ ಏಕತೆಗೆ ಧಕ್ಕೆ ತರುವಂತಿಲ್ಲ
ಡಿಜಿಟಲ್ ಸುದ್ದಿ ಪ್ರಕಾಶಕರು ಪ್ರಕಟಿಸುವ ಸುದ್ದಿಗಳು ಪ್ರಚೋದನಕಾರಿಯಾಗಬಾರದು. ದೇಶದ ಏಕತೆ ಮತ್ತು ಸಮಗ್ರತೆ, ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿರಬಾದರು. ದೇಶದ್ರೋಹ ಮತ್ತು ಪ್ರಚೋದನಕಾರಿ ಸ್ವರೂಪದ್ದಾಗಿರಬಾರದು. ಕೋಮು ಸಾಮರಸ್ಯವನ್ನು ಹದಗೆಡಿಸಬಾರದು ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಪ್ರಚೋದನಕಾರಿ ಸ್ವರೂಪದ ಮಾಹಿತಿಯನ್ನು ಹೋಸ್ಟ್ ಮಾಡದಂತೆ, ಪ್ರದರ್ಶಿಸದಂತೆ ಅಥವಾ ಪ್ರಕಟಿಸದಂತೆ ಸೂಚಿಸಲಾಗಿದೆ.
ಸುದ್ದಿ ವಾಹಿನಿಗಳು “ಧರ್ಮಗಳು ಅಥವಾ ಸಮುದಾಯಗಳ ಮೇಲಿನ ದಾಳಿ ಅಥವಾ ಧಾರ್ಮಿಕ ಗುಂಪುಗಳನ್ನು ನಿಂದಿಸುವ ಅಥವಾ ಕೋಮು ಮನೋಭಾವವನ್ನು ಉತ್ತೇಜಿಸುವ ದೃಶ್ಯಗಳು ಅಥವಾ ಪದಗಳನ್ನು ಒಳಗೊಂಡಿರುವ ಯಾವುದೇ ವಿಷಯವನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ. ಅಶ್ಲೀಲ, ಮಾನಹಾನಿಕರ, ಉದ್ದೇಶಪೂರ್ವಕ, ಸುಳ್ಳು ಮತ್ತು ಸೂಚಕ ವ್ಯಂಗ್ಯಗಳು ಮತ್ತು ಅರ್ಧ ಸತ್ಯಗಳನ್ನು ಒಳಗೊಂಡಿಬಾರದು. ಹಿಂಸಾಚಾರವನ್ನು ಉತ್ತೇಜಿಸುವ ಅಥವಾ ಪ್ರಚೋದಿಸುವ ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಗೆ ವಿರುದ್ಧವಾದ ಅಥವಾ ರಾಷ್ಟ್ರ ವಿರೋಧಿ ಮನೋಭಾವವನ್ನು ಉತ್ತೇಜಿಸುವ ಯಾವುದನ್ನಾದರೂ ಮಾಡಿದರೂ ತಪ್ಪು ಎಂದು ಹೇಳಲಾಗಿದೆ.