ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಭರ್ಜರಿ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ನಕಲಿ ಸುದ್ದಿಗಳ (Fake News) ತಡೆಗೆ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ನಕಲಿ ಸುದ್ದಿಗಳ ಹಾವಳಿ ತಡೆಗಾಗಿ ಕೇಂದ್ರ ಸರ್ಕಾರವು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೊದ (Press Information Bureau) ಫ್ಯಾಕ್ಟ್‌ಚೆಕ್ (PIB Fact Check) ಘಟಕ ಸ್ಥಾಪನೆ ಕುರಿತು ಕೇಂದ್ರ ಸರ್ಕಾರವು (Central Government) ಬುಧವಾರ (ಮಾರ್ಚ್ 20) ಅಧಿಸೂಚನೆ ಹೊರಡಿಸಿದೆ.
“ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಅಡಿಯಲ್ಲಿ ಪಿಐಬಿ ಫ್ಯಾಕ್ಟ್‌ಚೆಕ್ ಘಟಕವನ್ನು ತರಲಾಗಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ (IT Rules) ಅಡಿಯಲ್ಲಿ ಫ್ಯಾಕ್ಟ್‌ಚೆಕ್ ಘಟಕವು ಕಾರ್ಯನಿರ್ವಹಿಸಲಿದೆ” ಎಂದು ಕೇಂದ್ರ ಸರ್ಕಾರದ ಅಧಿಸೂಚನೆ ತಿಳಿಸಿದೆ. ಈಗಾಗಲೇ ಪಿಐಬಿ ಫ್ಯಾಕ್ಟ್‌ಚೆಕ್ ಘಟಕವಿದ್ದು, ಇದನ್ನು ಈಗ ಸರ್ಕಾರವು ಐಟಿ ನಿಯಮಗಳ ಅಡಿಯಲ್ಲಿ ಜಾರಿಗೆ ತಂದಿದೆ. ನಕಲಿ ಸುದ್ದಿಗಳ ಹಾವಳಿ ತಡೆಯುವ ಜತೆಗೆ, ಜನರಿಗೆ ಅಸಲಿ ಸುದ್ದಿಗಳು ಯಾವವು ಎಂಬುದನ್ನು ತಿಳಿಸುವುದು ಫ್ಯಾಕ್ಟ್‌ಚೆಕ್ ಘಟಕದ ಪ್ರಮುಖ ಉದ್ದೇಶವಾಗಿದೆ.
Centre notifies Fact Check Unit under PIB of Ministry of Information and Broadcasting as the fact check unit of the Central government pic.twitter.com/w2eqNd0k7R
— ANI (@ANI) March 20, 2024
ಹೇಗೆ ಕೆಲಸ ಮಾಡಲಿದೆ ಘಟಕ?
- ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಕುರಿತು ಸುಳ್ಳು ಸುದ್ದಿ ಹರಡಿದರೆ, ಕೂಡಲೇ ಫ್ಯಾಕ್ಟ್‌ಚೆಕ್ ಮೂಲಕ ಸ್ಪಷ್ಟನೆ
- ಫೇಸ್ಬುಕ್, ಎಕ್ಸ್ (ಟ್ವಿಟರ್) ಸೇರಿ ಯಾವುದೇ ಜಾಲತಾಣಗಳಲ್ಲಿ ಪಸರಿಸುವ ಮಾಹಿತಿ ಮೇಲೆ ವಿಶೇಷ ನಿಗಾ
- ಫ್ಯಾಕ್ಟ್‌ಚೆಕ್ ಮಾಡಿದ ಬಳಿಕ ಆಯಾ ಜಾಲತಾಣಗಳು ಪೋಸ್ಟ್ಗಳನ್ನು ಡಿಲೀಟ್ ಮಾಡಬೇಕು
ಇದನ್ನೂ ಓದಿ: Fact Check Day: ಅಂತಾರಾಷ್ಟ್ರೀಯ ಫ್ಯಾಕ್ಟ್‌ಚೆಕ್ ದಿನ; ಸುಳ್ಳು-ನಕಲಿ ಸುದ್ದಿಗಳ ಹರಡುವಿಕೆ ತಡೆಯೋಣ
ವಿರೋಧ ವ್ಯಕ್ತವಾಗಿತ್ತು
ಕೇಂದ್ರ ಸರ್ಕಾರವು ಈಗಾಗಲೇ ಅಸ್ತಿತ್ವದಲ್ಲಿರುವ ಫ್ಯಾಕ್ಟ್‌ಚೆಕ್ ಘಟಕವನ್ನು ಐಟಿ ನಿಯಮಗಳ ವ್ಯಾಪ್ತಿಗೆ ತರಲು ಕೆಲ ತಿಂಗಳ ಹಿಂದಷ್ಟೇ ಮುಂದಾದಾಗ ವಿರೋಧ ವ್ಯಕ್ತವಾಗಿತ್ತು. ಇದು ಮಾಧ್ಯಮಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, “ಕೇಂದ್ರ ಸರ್ಕಾರವು ಫ್ಯಾಕ್ಟ್‌ಚೆಕ್ ಘಟಕದ ನಕಲಿ ಸುದ್ದಿಗಳನ್ನು ತಡೆಯುವುದು, ಜನರಿಗೆ ನಿಖರ ಮಾಹಿತಿ ಮೂಲಕ ಜಾಗೃತಿ ಮೂಡಿಸುವ ಉದ್ದೇಶದಿಂದ ನಿಯಮ ಜಾರಿಗೆ ತರಲು ಮುಂದಾಗಿದೆ” ಎಂದಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ