ನವದೆಹಲಿ: ದೇಶದಲ್ಲಿ ಐನೂರು, ಸಾವಿರ ರೂ. ನೋಟು ನಿಷೇಧ ತೀರ್ಮಾನದ ಯಶಸ್ಸು ಹಾಗೂ ವೈಫಲ್ಯದ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ. ಇದರ ಬೆನ್ನಲ್ಲೇ, ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನೂ ನಿಷೇಧಿಸಬೇಕು (Ban Rs 2,000 Notes) ಎಂದು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸುಶೀಲ್ ಮೋದಿ ಹೇಳಿಕೆಯು ಹೊಸ ಚರ್ಚೆಗೆ ಕಾರಣವಾಗಿದೆ.
“ಮೂರು ವರ್ಷಗಳ ಹಿಂದೆಯೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ೨ ಸಾವಿರ ರೂ. ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಹಾಗಾಗಿ, ಈಗ ೨ ಸಾವಿರ ರೂ. ನೋಟುಗಳನ್ನು ಜಾರಿಯಲ್ಲಿರಿಸುವುದರಲ್ಲಿ ಅರ್ಥವಿಲ್ಲ. ಹಾಗೆಯೇ, ೨ ಸಾವಿರ ರೂ. ನೋಟುಗಳನ್ನು ಉಗ್ರರಿಗೆ ಹಣಕಾಸು ನೆರವು, ಮಾದಕವಸ್ತು ಸಾಗಣೆ, ಕಪ್ಪುಹಣ ಸಂಗ್ರಹಕ್ಕಾಗಿ ಬಳಸಲಾಗುತ್ತದೆ. ಹಾಗಾಗಿ, ಇವುಗಳನ್ನು ಹಿಂಪಡೆಯುವುದೇ ಒಳಿತು” ಎಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಬೇರೆ ದೇಶಗಳ ನೋಟುಗಳ ಮೌಲ್ಯದ ಕುರಿತು ಕೂಡ ಸುಶೀಲ್ ಮೋದಿ ಪ್ರಸ್ತಾಪಿಸಿದರು. “ಜಗತ್ತಿನ ಪ್ರಮುಖ ಹಾಗೂ ಅಭಿವೃದ್ಧಿ ಹೊಂದಿದ ಅಮೆರಿಕ, ಚೀನಾ, ಜರ್ಮನಿ, ಜಪಾನ್ ಸೇರಿ ಹಲವು ರಾಷ್ಟ್ರಗಳಲ್ಲಿ ನೋಟುಗಳ ಮೌಲ್ಯ ೧೦೦ ಡಾಲರ್ (ಅಥವಾ ಅಲ್ಲಿನ ಕರೆನ್ಸಿ) ದಾಟುವುದಿಲ್ಲ. ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರವು ಹಂತ ಹಂತವಾಗಿ ೨ ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಬೇಕು” ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2016ರ ನವೆಂಬರ್‌ನಲ್ಲಿ ಐನೂರು ಹಾಗೂ ಸಾವಿರ ರೂ. ನೋಟುಗಳನ್ನು ನಿಷೇಧಿಸಿದರು. ಇದಾದ ಬಳಿಕ, ನೂತನ ಐನೂರು ಹಾಗೂ ಎರಡು ಸಾವಿರ ರೂ. ಮೌಲ್ಯದ ನೋಟುಗಳು ಚಲಾವಣೆಗೆ ಬಂದವು. ಕೆಲ ವರ್ಷಗಳಿಂದ ಬಹುತೇಕ ಎಟಿಎಂಗಳಲ್ಲಿ ೨ ಸಾವಿರ ರೂ. ನೋಟುಗಳು ಲಭ್ಯವಿಲ್ಲ.
ಇದನ್ನೂ ಓದಿ | Demonetisation | ನೋಟು ನಿಷೇಧದ ಕುರಿತು ಲಿಖಿತ ಮಾಹಿತಿ ನೀಡಿ, ಕೇಂದ್ರ, ಆರ್‌ಬಿಐಗೆ ಸುಪ್ರೀಂ ನಿರ್ದೇಶನ